ಆನೇಕಲ್: ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದಿಂದ ಮುಖ್ಯರಸ್ತೆವರೆಗಿನ ಡಾಂಬರೀಕರಣ ಕಾರ್ಯಕ್ಕೆ ಶಾಸಕ ಬಿ. ಶಿವಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹುಸ್ಕೂರು ಗ್ರಾಮ ಪಂಚಾಯಿತಿ ನಗರಕ್ಕೆ ಸಮೀಪದಲ್ಲಿದೆ. ಸಾರ್ವಜನಿಕರಿಗೆ ಉತ್ತಮ ಸಂಪರ್ಕ ರಸ್ತೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಣ್ಣಿನ ಮಾರುಕಟ್ಟೆಯು ಹುಸ್ಕೂರು ಸಮೀಪದಲ್ಲಿದೆ. ಇದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ವಾಹನ ಸವಾರರಿಗೆ ಪರದಾಟವಾಗದಂತೆ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಗೆ ರಸ್ತೆ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು
ತಿಳಿಸಿದರು.
ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವ ಇದೆ. ಇದರಿಂದ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಹಾಗಾಗಿ, ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗಿದೆ. ಗ್ರಾಮಗಳಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವುದರಿಂದ ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.
ಮುಖಂಡ ಗಟ್ಟಹಳ್ಳಿ ಸೀನಪ್ಪ ಮಾತನಾಡಿ, ಮುಖ್ಯರಸ್ತೆಯ ಅಭಿವೃದ್ಧಿಯಿಂದ ಹುಸ್ಕೂರು ಗ್ರಾಮದಿಂದ ಸಿಂಗೇನಅಗ್ರಹಾರ, ಗೂಳಿಮಂಗಲ, ಲಕ್ಷ್ಮೀನಾರಾಯಣಪುರ ಗ್ರಾಮಗಳಿಗೆ ಸಂಪರ್ಕ ರಸ್ತೆ ಕಲ್ಪಿಸಿದಂತಾಗಿದೆ. ಹುಸ್ಕೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸಂಪರ್ಕ ರಸ್ತೆ, ಬಸ್ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಮತ ನೀಡಿದವರ ಋಣವನ್ನು ಅಭಿವೃದ್ಧಿ ಮೂಲಕ ತೀರಿಸಬೇಕಾದುದ್ದು ಜನಪ್ರತಿನಿಧಿಗಳ ಕರ್ತವ್ಯ ಎಂದು ತಿಳಿಸಿದರು.
ಹುಸ್ಕೂರು ಮದ್ದೂರಮ್ಮ ದೇವಾಲಯ ಸಮಿತಿ ಅಧ್ಯಕ್ಷ ಪಾಪಣ್ಣ, ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿನ್ನಸ್ವಾಮಿ, ಸದಸ್ಯ ಶ್ರೀನಾಥ್, ಮುಖಂಡರಾದ ಚೆಲುವರಾಜು, ಶಿವರಾಮ್, ರವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.