ದೇವನಹಳ್ಳಿ: ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿಯ ಕಟ್ಟಡ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ನವೀಕರಿಸಿ ಉದ್ಘಾಟಿಸಿದ ಬಳಿಕ ಶಿಲಾನ್ಯಾಸ ಮಾಡಲಾಗಿದ್ದು, ಕಾಮಗಾರಿಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಇದೇ ಪಂಚಾಯಿತಿಯ ಸದಸ್ಯ ಸೋಮಶೇಖರ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
‘₹1.5 ಕೋಟಿ ವೆಚ್ಚದಲ್ಲಿ ಪಂಚಾಯಿತಿ ಕಟ್ಟಡವನ್ನು ನವೀಕರಿಸಲಾಗಿದ್ದು, ಇತ್ತೀಚೆಗಷ್ಟೇ ನಿರ್ಗಮಿತ ಜಿ.ಪಂ ಸಿಇಒ ಕೆ.ರೇವಣಪ್ಪ ಅವರು ಉದ್ಘಾಟಿಸಿದ್ದರು. ಇದಾದ ಬಳಿಕ ಎರಡನೇ ಶನಿವಾರ ಶಂಕು ಸ್ಥಾಪನೆಯ ಅಡಿಗಲ್ಲು ನಾಮಫಲಕ ಅಳವಡಿಸಲಾಗಿದೆ. ಫಲಕದಲ್ಲಿ ನಮೂದಿಸಿರುವಂತೆ ಸೆಪ್ಟೆಂಬರ್ 2021ರಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯೂ ಅಸ್ತಿತ್ವದಲ್ಲಿಯೇ ಇರಲಿಲ್ಲ, ಆದರೆ, ಚುನಾಯಿತ ಜನಪ್ರತಿನಿಧಿಗಳ ಹೆಸರನ್ನು ಹೇಗೆ ಹಾಕಿಸಿದ್ದಾರೆ’ ಎಂದು
ಪ್ರಶ್ನಿಸಿದರು.
‘ಮೂಲಸೌಕರ್ಯಕ್ಕೆ ಬಳಸಬೇಕಾದ ನಿಧಿ-2ರ ತೆರಿಗೆ ಹಣದಲ್ಲಿ ₹80 ಲಕ್ಷವನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿದ್ದಾರೆ. ನರೇಗಾ ಯೋಜನೆಯ ₹19 ಲಕ್ಷ ಹಣ ಬಳಕೆ ಮಾಡಲಾಗಿದೆ. ಇದು ನಿಯಮಕ್ಕೆ ವಿರುದ್ಧವಾಗಿದೆ. ಅಲ್ಲದೆ ದಾನಿಗಳಿಂದಲೂ ಲಕ್ಷಾಂತರ ಹಣ ಚಂದ ಸಂಗ್ರಹಿಸಲಾಗಿದೆ. ಇದಕ್ಕೆ ಕಾನೂನು ಮಾನ್ಯತೆ ಇಲ್ಲ’ ಎಂದು ಟೀಕಿಸಿದರು.
‘ನಿರ್ಗಮಿತ ಜಿ.ಪಂ. ಸಿಇಒ ತಮ್ಮ ಕೆಲಸದ ಕೊನೆಯ ದಿನ ಕಟ್ಟಡ ಉದ್ಘಾಟಿಸಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೂಲಕ ಅನುಮತಿ ಪಡೆಯದೆ ನೇರವಾಗಿ ಜಿ.ಪಂ. ಸಿಇಓ ಬಳಿಯೇ ಅನುಮತಿ ಪಡೆದಿರುವುದು ಸಾಕಷ್ಟು ಅನುಮಾನ ಮೂಡಿಸಿದೆ’ ಎಂದು
ತಿಳಿಸಿದರು.
ಲಕ್ಷಾಂತರ ರೂಪಾಯಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಮಿತಿ ರಚಿಸಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.