ADVERTISEMENT

ದೊಡ್ಡಬಳ್ಳಾಪುರ: ಎಚ್‌ಡಿಕೆಗೆ ಗೋ ಬ್ಯಾಕ್‌ ಬಿಸಿ

ಪ್ರಚಾರ ವೇಳೆ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 20:15 IST
Last Updated 15 ಏಪ್ರಿಲ್ 2024, 20:15 IST
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ‘ಗೋ ಬ್ಯಾಕ್’ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತಿ
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ‘ಗೋ ಬ್ಯಾಕ್’ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತಿ   

ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ಜೆಡಿಎಸ್‌ ರಾಜ್ಯ ಘಟಕ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಗೋ ಬ್ಯಾಕ್‌ ಬಿಸಿ ತಟ್ಟಿತು.

‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂಬ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯಕರ್ತೆಯರು ಪ್ರಚಾರ ಸಭೆಯ ವೇದಿಕೆ ಬಳಿ ‘ಗೋ ಬ್ಯಾಕ್‌’ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಯಿತು.

ಕಳೆದ ಲೋಕಸಭೆಯಲ್ಲಿ ಮಹಿಳೆಯ ಬಗ್ಗೆ ಹಗುರುವಾಗಿ ಮಾತನಾಡಿದ ಪರಿಣಾಮ ಜೆಡಿಎಸ್‌ ಮಂಡ್ಯದಲ್ಲಿ ಸೋಲಬೇಕಾಯಿತು. ಕುಮಾರಸ್ವಾಮಿ ಅವರು ಇನ್ನು ಮುಂದೆ ಮಹಿಳೆಯರ ಬಗ್ಗೆ ಮಾತನಾಡುವಾಗ ಎಚ್ಚರವಾಗಿ ಮಾತನಾಡಬೇಕು. ಈಗ ನೀಡಿರುವ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ರೇವತಿ ಅನಂತರಾಮ್ ಮಾತನಾಡಿ, ಕುಮಾರಸ್ವಾಮಿ ಗ್ಯಾರಂಟಿ ಯೋಜನೆ ಟೀಕಿಸುವುದರೊಂದಿಗೆ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಹೇಳಿರುವುದು ಆಕ್ಷೇಮ್ಯ. ಯಾರು ಹಾದಿ ತಪ್ಪುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ನಿಮ್ಮ ಮಾತಿನ ಮೇಲೆ ನಿಗಾ ಇದೆಯಾ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದು ಇದೇ ಮೊದಲಲ್ಲ. ಈ ಹಿಂದೆ ಸುಮಲತಾ ಅವರ ಬಗ್ಗೆಯೂ ಇದೇ ರೀತಿಯಾಗಿ ಮಾತನಾಡಿ ಸೋಲು ಕಂಡಿದ್ದರು. ಅವರು ಮಹಿಳೆಯರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಕುಮಾರಸ್ವಾಮಿ ಹೇಳಿಕೆ ಕ್ಷಮಿಸಲಾರದ ಅಪರಾಧವಾಗಿದೆ. ಮಹಿಳೆಯರ ಕುರಿತು ಅವರ ಹಗುರ ಮಾತು ಮುಂದುವರೆದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯೆ ನಾಗವೇಣಿ, ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ, ಕಾಂಗ್ರೆಸ್ ಮುಖಂಡರಾದ ಕೆ.ಎಂ.ಕೃಷ್ಣಮೂರ್ತಿ, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.