ಪ್ರಜಾವಾಣಿ ವಾರ್ತೆ
ದೊಡ್ಡಬಳ್ಳಾಪುರ: ಟೋಲ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿ ಕಸದ ಲಾರಿಗಳು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಹಳ್ಳಿಗಳ ಮೂಲಕ ದೊಡ್ಡಬಳ್ಳಾಪುರ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಗೆ ಬಂದು ಸೇರುತ್ತಿರುವುದನ್ನು ಖಂಡಿಸಿ ಕೊಡಿಗೇಹಳ್ಳಿ ಸಮೀಪ ಬುಧವಾರ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಂತಿ ವೆಂಕಟೇಶ್, ‘ಬಿಬಿಎಂಪಿ ವ್ಯಾಪ್ತಿಯ ಕಸ ತುಂಬಿಕೊಂಡು ಪ್ರತಿನಿತ್ಯ ನೂರಾರು ಲಾರಿಗಳು ತಾಲ್ಲೂಕಿನ ದೊಡ್ಡಬೆಳವಂಗಲ ಸಮೀಪದ ಚೀಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುತ್ತಿವೆ. ಇಷ್ಟು ದಿನಗಳಿಂದ ದಾಬಸ್‌ಪೇಟೆಯಿಂದ ಹುಲಿಕುಂಟೆ ಟೋಲ್ ಮೂಲಕ ಬರುತ್ತಿದ್ದವು. ಟೋಲ್ ಶುಲ್ಕ ಸಂಗ್ರಹ ಪ್ರಾರಂಭಿಸಿದ್ದರಿಂದ ಅಡ್ಡದಾರಿಯಲ್ಲಿ ಸಂಚರಿಸಲು ಆರಂಭಿಸಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಸ ತುಂಬಿದ ಲಾರಿಗಳು ಗ್ರಾಮಗಳಲ್ಲಿ ಹಾದುಹೋಗುವಾಗ ಹಳ್ಳಿಗಳಲ್ಲಿ ದುರ್ನಾತ ವ್ಯಾಪಿಸುತ್ತಿದೆ. ಜೊತೆಗೆ ರಸ್ತೆಯುದ್ದಕ್ಕೂ ಲಾರಿಯಿಂದ ಸೋರುವ ತ್ಯಾಜ್ಯ ನೀರಿನಿಂದಾಗಿ ಜನರು ಮೂಗುಮುಚ್ಚಿಕೊಂಡುವ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕಸದ ಲಾರಿಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಕಸದ ಲಾರಿಗಳು ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಇತರೆಡೆ ಅಪಘಾತ ನಡೆಸಿ ಹತ್ತಾರು ಜನರ ಜೀವ ತೆಗೆದಿರುವ ಆರೋಪಕ್ಕೂ ಗುರಿಯಾಗಿವೆ. ಇಂತಹ ಲಾರಿಗಳಿಂದ ನಮ್ಮೂರಿನ ಭಾಗದಲ್ಲೂ ಅನಾಹುತ ಸಂಭವಿಸುವ ಮುನ್ನ ಕಸದ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಚಿಗರೇನಹಳ್ಳಿ ಸಮೀಪ ಕಸ ವಿಲೇವಾರಿ ಘಟಕ ಬಂದ್ ಮಾಡುವಂತೆ ಶಾಸಕ ಧೀರಜ್ ಮುನಿರಾಜ್ ಸದನದಲ್ಲಿ ಹಲವಾರು ಬಾರಿ ದ್ವನಿ ಎತ್ತಿದ್ದಾರೆ. ಕಸ ವಿಲೇವಾರಿ ಘಟಕವಿರುವ ಸುತ್ತಮುತ್ತಲಿನ ಹಳ್ಳಿಗಳ ಜನರು ಶುದ್ಧ ಗಾಳಿ, ಕುಡಿಯುವ ನೀರು ಇಲ್ಲದೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗದೆ ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡಬಳ್ಳಾಪುರ ಮಾರ್ಗವಾಗಿ ಕಸದ ಲಾರಿಗಳು ಸಂಚರಿಸಿ ಇಲ್ಲಿನ ಜನರ ಪ್ರಾಣಕ್ಕೂ ಕುತ್ತು ತರುತ್ತಿವೆ ಎಂದು ದೂರಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಆರ್‌ಟಿಒ ಅಧಿಕಾರಿಗಳು ಹಾಗೂ ಪೊಲೀಸರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.