ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ವಾರದಿಂದಲೂ ಬೀಳತ್ತಿರುವ ಮಳೆಯಿಂದ ಸೇವಂತಿಗೆ ಸೇರಿದಂತೆ ವಿವಿಧ ರೀತಿಯ ಹೂವುಗಳು ಗಿಡದಲ್ಲೇ ಕೊಳೆಯುತ್ತಿದ್ದು, ದೀಪಾವಳಿ ಹಬ್ಬಕ್ಕೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿದ್ದ ರೈತರನ್ನು ಕಂಗಾಲಾಗುವಂತೆ ಮಾಡಿದೆ.
ನಾರಸಿಂಹನಹಳ್ಳಿ ಗ್ರಾಮದ ಹೂವು ಬೆಳೆಗಾರರಾದ ಶ್ರೀಕಾಂತ್, ನರಸೇಗೌಡ ಅವರ ತೋಟದಲ್ಲಿ ಬೆಳೆಯಲಾಗಿದ್ದ ಸಿಲೋಷಿಯಾ ಎಂಬ ಅಲಂಕಾರಿಕ ಹೂವಿನ ಗಿಡಗಳು ಸತತ ಮಳೆಯಿಂದಾಗಿ ಕೊಳೆತು ಹೋಗಿದ್ದರಿಂದ ಗಿಡಗಳನ್ನು ತೆರವುಗೊಳಿಸುತ್ತಿದ್ದಾರೆ.
‘ಒಂದು ಎಕರೆ ಜಮೀನಿನಲ್ಲಿ ಸುಮಾರು ₹8 ಲಕ್ಷ ಖರ್ಚು ಮಾಡಿ ಸಿಲೋಷಿಯಾ ಅಲಂಕಾರಿಕ ಹೂ ಬೆಳೆಯಲಾಗಿತ್ತು. ಈ ಹೂವುಗಳು ಕೊಲ್ಕತ್ತಾ, ಬಾಂಬೆ, ಮುಂಬೈ, ಹೈದರಾಬಾದ್ ಸೇರಿದಂತೆ ಹೊರ ರಾಜ್ಯಗಳಿಗೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡಲಾಗುತಿತ್ತು. ಅಲಂಕಾರಿಕ ಹೂವುಗಳಾಗಿದ್ದರಿಂದ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿತ್ತು. ಆದರೆ ಸತತವಾಗಿ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಸಂಪೂರ್ಣ ಬೆಳೆ ನಷ್ಟವಾಗಿದೆ. ಈಗ ಗಿಡಗಳ ಸಮೇತ ಕಿತ್ತು ತಿಪ್ಪೆಗೆ ಹಾಕುವಂತೆ ಆಗಿದೆ’ ಎಂದು ತಮ್ಮ ಅಳಲು ತೋಡಿಕೊಂಡರು ಹೂವು ಬೆಳೆಗಾರರಾದ ಶ್ರೀಕಾಂತ್, ನರಸೇಗೌಡ.
‘ಮೂರು ತಿಂಗಳ ಕಾಲ ಮಗುವಿನಂತೆ ಪೋಷಿಸಿ ಬೆಳೆಸಲಾಗಿದ್ದ ಹೂವಿನ ಗಿಡಗಳನ್ನು ಕಿತ್ತು ತಿಪ್ಪೆಗೆ ಹಾಕುವಂತಹ ಸ್ಥಿತಿ ಬಂದಿದೆ. ಬೆಳೆ ನಷ್ಟದ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸೌಜನ್ಯಕ್ಕಾದರು ತೋಟಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿಲ್ಲ. ಇಂತಹ ಅಧಿಕಾರಿಗಳಿಂದ ಬೆಳೆನಷ್ಟ ಪರಿಹಾರ ನಿರೀಕ್ಷೆ ಮಾಡುವಂದಂತು ದೂರದ ಮಾತು’ ಎಂದು ರೈತ ನರಸೇಗೌಡ ಅಸಮದಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.