ವಿಜಯಪುರ(ದೇವನಹಳ್ಳಿ): ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶನಿವಾರ ಸಂಜೆ ಬಿದ್ದ ಮಳೆಯಿಂದ ಬಾಡಿ ಹೋಗುತ್ತಿದ್ದ ರಾಗಿ ಪೈರುಗಳು ಮರುಜೀವ ಪಡೆದುಕೊಂಡು ನಳನಳಿಸುತ್ತಿವೆ.
ಕಳೆದ 15 ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದರೂ ಮಳೆಯ ಆಗದೆ ರಾಗಿ ಪೈರುಗಳು ಒಣಗಿಹೋಗುತ್ತಿದ್ದವು. ಶನಿವಾರದ ಮಳೆಯಿಂದ ಹೊಲಗಳಲ್ಲಿ ಜೀವಕಳೆ ಬಂದಿದೆ. ಮುಂಗಾರು ಕೆಲವೇ ದಿನಗಳಲ್ಲಿ ಅಂತ್ಯವಾಗುತ್ತಿದ್ದು, ಹಿಂಗಾರು ಮಳೆಯು ಉತ್ತಮವಾಗಿ ಬಿದ್ದರೆ ಈ ಬಾರಿ ರಾಗಿ ಬೆಳೆ ಉತ್ತಮ ಇಳುವರಿ ನೀಡಲಿದೆ ಎಂದು ರೈತ ನರಸಿಂಹಪ್ಪ ಆಶಾಭಾವನೆ ವ್ಯಕ್ತಪಡಿಸಿದರು.
ಮಳೆ ಬಿದ್ದಿರುವ ಕಾರಣ, ಪೈರುಗಳಲ್ಲಿ ಗುಂಟೆ ಹೊಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗ ಒತ್ತಾಗಿ ಬೆಳೆದಿರುವ ಪೈರುಗಳನ್ನು ಕಳೆದರೆ, ಬೆಳೆಯು ಉತ್ತಮವಾಗಿ ಬರುತ್ತದೆ. ಗುಂಟೆ ಹೊಡೆಯುವಾಗ ಕಳೆಯು ಸ್ವಲ್ಪಮಟ್ಟಿಗೆ ನಾಶವಾಗುತ್ತದೆ. ನಂತರ ಸ್ವಲ್ಪ ಯೂರಿಯಾ ಕೊಟ್ಟರೆ ಬೆಳೆ ಫಲವತ್ತಾಗಿ ಬರುತ್ತದೆ. ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಆಗುವುದರ ಮೇಲೆ ಬೆಳೆಯ ಭವಿಷ್ಯ ನಿಂತಿದೆ ಎಂದು ರೈತ ಕೃಷ್ಣಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.