ADVERTISEMENT

ಮಳೆ: ಕೆರೆಯಂತಾದ ಎಲೆಕ್ಟ್ರಾನಿಕ್‌ಸಿಟಿ, ವೀರಸಂದ್ರ ರಸ್ತೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:51 IST
Last Updated 22 ಅಕ್ಟೋಬರ್ 2024, 15:51 IST
ಆನೇಕಲ್‌ ತಾಲ್ಲೂಕಿನ ವೀರಸಂದ್ರದಲ್ಲಿ ಭಾರಿ ಮಳೆಯಿಂದಾಗಿ ಕೆರೆಯಂತಾಗಿರುವ ರಸ್ತೆ
ಆನೇಕಲ್‌ ತಾಲ್ಲೂಕಿನ ವೀರಸಂದ್ರದಲ್ಲಿ ಭಾರಿ ಮಳೆಯಿಂದಾಗಿ ಕೆರೆಯಂತಾಗಿರುವ ರಸ್ತೆ   

ಆನೇಕಲ್ : ತಾಲ್ಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ ಬೆಂಗಳೂರಿನ ಐಟಿ ಹಬ್‌ ಎಲೆಕ್ಟ್ರಾನಿಕ್‌ಸಿಟಿ ಮತ್ತು ವೀರಸಂದ್ರ ರಸ್ತೆಗಳು ಕೆರೆಯಂತಾಗಿವೆ.

ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳ ಸವಾರರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸೋಮವಾರ ಸಂಜೆ ಪ್ರಾರಂಭವಾದ ಮಳೆ ಮಂಗಳವಾರ ಬೆಳಗ್ಗೆ ಸ್ವಲ್ಪ ಬಿಡುವು ನೀಡಿತ್ತು. ಮಂಗಳವಾರ ಮಧ್ಯಾಹ್ನ 12ಕ್ಕೆ ಪ್ರಾರಂಭವಾದ ಮಳೆ ಸಂಜೆ 7ಗಂಟೆವರೆಗೂ ನಿರಂತರವಾಗಿ ಸುರಿಯುತ್ತಲೇ ಇತ್ತು. ಆನೇಕಲ್‌-ಚಂದಾಪುರ ರಸ್ತೆಯ ವಿಜಯ ನರ್ಸಿಂಗ್‌ ಹೋಂ ಮುಂಭಾಗದಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿತ್ತು.

ADVERTISEMENT

ಮಂಗಳವಾರ ಸುರಿದ ಮಳೆಯಿಂದಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಕಷ್ಟ ಪರದಾಡಿದರು. ಮಳೆಯ ನಡುವೆಯೇ ಕಾರ್ಮಿಕರು ರೈನ್‌ ಕೋಟ್‌ ಧರಿಸಿ ತಮ್ಮ ಕಾರ್ಯ ಮುಗಿಸಿ ಮನೆಗಳತ್ತ ಹೊರಡುತ್ತಿದ್ದ ದೃಶ್ಯ ಕಂಡು ಬಂದಿತು.

ಸದಾ ವಾಹನಗಳಿಂದ ಗಿಜಿಗುಟ್ಟುವ ರಾಷ್ಟ್ರೀಯ ಹೆದ್ದಾರಿ 44 ಮಳೆ ಆರ್ಭಟದಿಂದಾಗಿ ವಾಹನಗಳ ಸಂಖ್ಯೆ ಇಳಿಮುಖವಾಗಿತ್ತು. ಚಂದಾಪುರ, ಅತ್ತಿಬೆಲೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಬದಿಗಳಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಮಳೆ ನಿಲ್ಲುವಿಕೆಗಾಗಿ ಕಾಯುತ್ತಿದ್ದ ದೃಶ್ಯವೂ  ಸಾಮಾನ್ಯವಾಗಿತ್ತು.

ಅತ್ತಿಬೆಲೆ, ಬೊಮ್ಮಸಂದ್ರ, ಜಿಗಣಿ, ವೀರಸಂದ್ರ ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆ ನಡುವೆಯೂ ಕಾರ್ಮಿಕರ ಸಂಚಾರ ಕಂಡು ಬಂದಿತು. ಮಳೆಯಿಂದಾಗಿ ಆಟೊ ದರ ಹೆಚ್ಚಾಗಿತ್ತು. ಕೆಲವು ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ, ಕಾಲೇಜುಗಳು ಎಂದಿನಂತೆ ನಡೆದವು.

ಮುನ್ನೆಚ್ಚರಿಕ ಕ್ರಮ : ತಾಲ್ಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಯಾವುದೇ ರೀತಿಯ ಅಪಾಯ ಆಗದಂತೆ ಅತ್ತಿಬೆಲೆ ಪುರಸಭೆ ವತಿಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಅತ್ತಿಬೆಲೆ ಪುರಸಭೆ ವತಿಯಿಂದ ರಾಜಕಾಲುವೆ ಸ್ವಚ್ಛಗೊಳಿಸಲಾಯಿತು

ರಾಜಕಾಲುವೆಗಳಲ್ಲಿ ತ್ಯಾಜ್ಯ ತುಂಬಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯಲಿಲ್ಲ. ಈ ಹಿನ್ನೆಲೆಯಲ್ಲಿ ಅತ್ತಿಬೆಲೆ ಪುರಸಭೆ ವತಿಯಿಂದ ರಾಜಕಾಲುವೆ ಸ್ವಚ್ಛಗೊಳಿಸಲಾಯಿತು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ತಿಳಿಸಿದರು.

ವಾಡಿಕೆಗಿಂತ ಹೆಚ್ಚಾದ ಮಳೆ : ಆನೇಕಲ್‌ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಅತ್ತಿಬೆಲೆ, ಕಸಬಾ, ಜಿಗಣಿ, ಸರ್ಜಾಪುರ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ಸರ್ಜಾಪುರದಲ್ಲಿ 309ಮಿ.ಮೀ. ಮಳೆಯಾಗಿದ್ದು ವಾಡಿಕೆಗಿಂತ ಶೇ100ರಷ್ಟು ವಾಸ್ತವ ಮಳೆಯಾಗಿದೆ.

ಅತ್ತಿಬೆಲೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ಮುಚ್ಚುತ್ತಿರುವ ಪುರಸಭೆ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.