ADVERTISEMENT

ರಾಜ್ಯದ ವಿವಿಧೆಡೆ ಭಾರಿ ಮಳೆ: ಕೋಡಿ ಹರಿದ ಕೆರೆ, ತುಂಬಿ ಹರಿದ ನದಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 23:48 IST
Last Updated 3 ಅಕ್ಟೋಬರ್ 2024, 23:48 IST
ಕೋಡಿ ಬಿದ್ದ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆ 
ಕೋಡಿ ಬಿದ್ದ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆ    

ಬೆಂಗಳೂರು ಗ್ರಾಮಾಂತರ ಜಿಲ್ಲೆ/ ತುಮಕೂರು: ತುಮಕೂರು ಜಿಲ್ಲೆಯ ಬಹುತೇಕ ಕಡೆ ಬುಧವಾರ ರಾತ್ರಿಯಿಡಿ ಸುರಿದ ಉತ್ತಮ ಮಳೆಗೆ ಹೆಚ್ಚಿನ ಕೆರೆಕಟ್ಟೆಗಳು ತುಂಬಿ ಹರಿದಿವೆ. ಮಧುಗಿರಿ ತಾಲ್ಲೂಕು ಪುರವರದಲ್ಲಿ ಅತಿಹೆಚ್ಚು 7.9 ಸೆಂ.ಮೀ ಹಾಗೂ ಹೊಳವನಹಳ್ಳಿಯಲ್ಲಿ 6.8 ಸೆಂ.ಮೀ ಮಳೆಯಾಗಿದೆ.

ಹೇಮಾವತಿ ನದಿ ನೀರಿನಿಂದ ತುಂಬಿದ್ದ ಸಿದ್ಧಾಪುರ ಹಾಗೂ ಚೋಳೇನಹಳ್ಳಿ ಕೆರೆಗಳು ಸೇರಿದಂತೆ ಮಧುಗಿರಿ ತಾಲ್ಲೂಕಿನ ಹಲವು ಕೆರೆಗಳು ಬುಧವಾರ ರಾತ್ರಿ ಸುರಿದ ಮಳೆಗೆ ತುಂಬಿ ಕೋಡಿ ಬಿದ್ದಿವೆ. ಕೋಡಿ ಬಿದ್ದ ನೀರಿನಲ್ಲಿ ಮೀನು ಹಿಡಿಯಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ.   

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕುಮದ್ವತಿ ಮತ್ತು ಜಯಮಂಗಲಿ ನದಿಗಳು ತುಂಬಿ ಹರಿಯುತ್ತಿವೆ. ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರ ಗ್ರಾಮದ ಬಳಿ ಕುಮುದ್ವತಿ ನದಿ ಸೇತುವೆ ಮೇಲೆ ಹರಿಯುತ್ತಿದೆ. ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. 

ADVERTISEMENT

ಗೌರಿಬಿದನೂರು ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಭಾರಿ ಗಾಳಿ, ಮಳೆಗೆ ಟ್ರಾನ್ಸ್‌ಫಾರ್ಮರ್‌ ಮತ್ತು ಮರಗಳು ರಸ್ತೆಗೆ ಉರುಳಿ ಬಿದ್ದಿವೆ.ಬಾಳೆ ಗಿಡ, ಕಟಾವಿಗೆ ಬಂದಿದ್ದ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ. 

ಮಳೆಗೆ ನೆಲಕ್ಕಚ್ಚಿದ ಭತ್ತ


ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ಗುರುವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದೆ. ಗಂಗಾವತಿ ತಾಲ್ಲೂಕಿನ ಕೇಸಕ್ಕಿ ಹಂಚಿನಾಳ, ಮಸಾರಿಕ್ಯಾಂಪ್, ಹಳೆಗುಳದಾಳ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಭತ್ತದ ಬೆಳೆ ನೆಲಕ್ಕಚ್ಚಿದೆ.

ಕೆಲ ಗ್ರಾಮಗಳಲ್ಲಿ ಮಳೆಗೆ ಮನೆಗಳು ಬಿದ್ದಿದ್ದು, 100ಕ್ಕೂ ಹೆಚ್ಚು ಎಕರೆಯ ಭತ್ತದ ಜಮೀನಿಗೆ ಹಾನಿಯಾಗಿದೆ. ತಾವರಗೇರಾದಲ್ಲಿಯೂ ಚೆನ್ನಾಗಿ ಮಳೆ ಬಂದಿದೆ.

ತುಂಬಿ ಹರಿಯುತ್ತಿರುವ ಕುಮದ್ವತಿ ನದಿಯಲ್ಲಿ ಸಂಭ್ರಮಿಸುತ್ತಿರುವ ಜನರು 
ತುಂಬಿ ಹರಿಯುತ್ತಿರುವ ಜಯಮಂಗಲಿ ನದಿ 
ಸೇತುವೆ ಮೇಲೆ ಹರಿಯುತ್ತಿರುವ ಕುಮುದ್ವತಿ ನದಿ ನೀರು
ಗಾಳಿ ಮಳೆಗೆ ಮುರಿದು ಬಿದ್ದ ಬಾಳೆ ಗಿಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.