ADVERTISEMENT

ಸೂಲಿಬೆಲೆ: ಬಿರುಕು ಬಿಟ್ಟ ಶಾಲಾ ಕೊಠಡಿಯಲ್ಲಿ ಪಾಠ

ಯನಗುಂಟೆ ಸೇರಿ ಹಲವು ಸರ್ಕಾರಿ ಶಾಲೆಗಳಿಗೆ ಬೇಕು ನೂತನ ಕಟ್ಟಡ

ಪ್ರಜಾವಾಣಿ ವಿಶೇಷ
Published 24 ಜೂನ್ 2024, 3:29 IST
Last Updated 24 ಜೂನ್ 2024, 3:29 IST
ಯನಗುಂಟೆ ಸರ್ಕಾರಿ ಶಾಲಾ ಕಟ್ಟಡ ಚಿತ್ರ
ಯನಗುಂಟೆ ಸರ್ಕಾರಿ ಶಾಲಾ ಕಟ್ಟಡ ಚಿತ್ರ   

ಸೂಲಿಬೆಲೆ: ಹೋಬಳಿಯ ಯನಗುಂಟೆ ಸೇರಿದಂತೆ ಹಲವು ಗ್ರಾಮಗಳ ಸರ್ಕಾರಿ ಶಾಲೆಗಳ ಕಟ್ಟಡಗಳ ಶಿಥಿಲವಾಗಿವೆ.

ನೀರು, ಶೌಚಾಲಯದಂಥ ಮೂಲಸೌಕರ್ಯಗಳನ್ನು ಕೊರತೆ ಇಲ್ಲವಾದರೂ, ಶಾಲೆಗಳಿಗೆ ಸುಸಜ್ಜಿತ ಕಟ್ಟಡಗಳು ಇಲ್ಲದಂತಾಗಿದೆ. ಇದರಿಂದ ಶಿಥಿಲಗೊಂಡಿರುವ, ಬಿರುಕು ಬಿಟ್ಟಿರುವ ತರಗತಿ ಕೊಠಡಿಗಳಲ್ಲೇ ಶಿಕ್ಷಕರಿಗೆ ಪಾಠ ಮಾಡುವ ಹಾಗೂ ವಿದ್ಯಾರ್ಥಿಗಳಿಗೆ ಕಲಿಯುವ ಅನಿವಾರ್ಯತೆ ಉಂಟಾಗಿದೆ.

ಸೂಲಿಬೆಲೆ ಹೋಬಳಿ ಶೈಕ್ಷಣಿಕವಾಗಿ ಹೆಚ್ಚು ಪ್ರಗತಿಯನ್ನು ಹೊಂದಿರುವ ಹೋಬಳಿಯಾಗಿದೆ. ಇಲ್ಲಿ ಪದವಿ ಮತ್ತು ಪಿಯು ಸರ್ಕಾರಿ ಹಾಗೂ ಖಾಸಗಿ ಶಾಲೆ ಮತ್ತು ಕಾಲೇಜುಗಳಿವೆ. ಸುತ್ತಮುತ್ತಲಿನ ಹತ್ತಾರು ಗ್ರಾಮದ ವಿದ್ಯಾರ್ಥಿಗಳು ಇಲ್ಲಿಗೆ ಬರುವರು. ಆದರೆ,  ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳ ಸೌಕರ್ಯವಿಲ್ಲ.

ADVERTISEMENT

ಹೋಬಳಿಯಲ್ಲಿ ಸೂಲಿಬೆಲೆ, ಬೆಂಡಿಗಾನಹಳ್ಳಿ, ಬೇಗೂರು, ಟಿ.ಅಗ್ರಹಾರ ನಾಲ್ಕು ಕ್ಲಸ್ಟರ್‌ಗಳಿವೆ.  ಬೆಂಡಿಗಾನಹಳ್ಳಿಯಲ್ಲಿ ಒಂದು ಸರ್ಕಾರಿ ಪ್ರೌಢಶಾಲೆಇದೆ.  ಸರ್ಕಾರದಿಂದ ಹೊಸ ಕೊಠಡಿಗಳಿಗೆ ಅಗತ್ಯ ಅನುದಾನ ಲಭ್ಯವಿಲ್ಲ. ಕೆಲವಡೆ ಶಾಲೆಯ ಆಸ್ತಿಗಳು ದಾನ ಕೊಟ್ಟಿರುವವರ ಹೆಸರಿನಲ್ಲಿಯೇ ಇದ್ದು, ಇನ್ನೂ ಶಿಕ್ಷಣ ಇಲಾಖೆ ಹೆಸರಿಗೆ ವರ್ಗಾವಣೆಗೊಂಡಿಲ್ಲ.

ಸೂಲಿಬೆಲೆ ಸುತ್ತಮುತ್ತ ಈಗ ಭೂಮಿಯ ಬೆಲೆ ಹೆಚ್ಚಾಗಿರುವ ಕಾರಣ ಶಾಲೆಗೆ ಜಮೀನು ದಾನ ಕೊಟ್ಟಿರುವ ವಂಶಸ್ಥರು ಶಾಲೆಯ ಜಮೀನು ನಮಗೆ ವಾಪಸ್ ಕೊಡಿ ಎಂದು ಕೋರ್ಟ್‌ಗಳಲ್ಲಿ ದಾವೆ ಹೂಡಿದ್ದಾರೆ.

ಹೋಬಳಿಯ ಯನಗುಂಟೆ ಸರ್ಕಾರಿ ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಒಂದು ಕೊಠಡಿಯಲ್ಲಿ ಕಚೇರಿ, ದಾಸ್ತಾನು ಮತ್ತು ತರಗತಿ, ಉಳಿದ ಒಂದು ಕೊಠಡಿಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ 52ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆ ಜಮೀನು ತಕರಾರು ನ್ಯಾಯಾಲಯದಲ್ಲಿರುವದರಿಂದ ಕಟ್ಟಡ ಕೆಡವುವಂತಿಲ್ಲ. ಅತ್ತ ಹೊಸ ಕಟ್ಟಡವೂ ಇಲ್ಲದಂತಾಗಿದೆ.

ಖಾಸಾಗಿ ಶಾಲೆಗಳು ಹೈಟಿಕ್ ತಂತ್ರಜ್ಞಾನವನ್ನು ಆಳವಡಿಸಿಕೊಂಡು ಮಕ್ಕಳನ್ನು ಸೆಳೆಯುತ್ತಿವೆ. ಆದರೆ, ಸರ್ಕಾರಿ ಶಾಲೆಗಳು ಓಬೀರಾಯನ ಕಾಲದ ಕಟ್ಟಡಗಳಲ್ಲಿಯೇ ಇವೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಬೇಕಿರುವ ಸರ್ಕಾರಿ ಶಾಲೆಗಳಲ್ಲಿ ಅಧುನಿಕ ಕಲಿಕಾ ಸಾಮಗ್ರಿಗಳೊಂದಿಗೆ ಅತ್ಯುತ್ತಮ ಕಟ್ಟಡಗಳ ಅಗತ್ಯ ಹೆಚ್ಚಾಗಿ ಕಂಡು ಬರುತ್ತಿದೆ.

ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡಗಳಲ್ಲಿ ಚಾವಣಿ ಚೆನ್ನಾಗಿದ್ದರೆ, ಕಿಟಿಕಿ, ಬಾಗಿಲು, ನೆಲಹಾಸು ಕಿತ್ತು ಹೋಗಿವೆ. ಈ ದೃಶ್ಯ ಹಲವು ಗ್ರಾಮಗಳ ಶಾಲೆಗಳಲ್ಲಿ ಸಾಮಾನ್ಯ. ಸರ್ಕಾರ ದುರಸ್ತಿ ಹಾಗೂ ರಿಪೇರಿಗಾಗಿ ಅನುದಾನ ಒದಗಿಸಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ.

ಹೊಸ ಕಟ್ಟಡಗಳಿಗಿಂತಲೂ ದುರಸ್ತಿ ಆಗಬೇಕಿರುವ ಶಾಲೆಗಳೇ ಹೆಚ್ಚಾಗಿವೆ. ಇವುಗಳಿಗೆ ಶೀಘ್ರ ಕಾಯಕಲ್ಪವಾಗಬೇಕಿದೆ. ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿಗಳನ್ನು ಸಿಎಸ್‌ಆರ್ ಅನುದಾನದಡಿಯಲ್ಲಿ ಅನುಕೂಲ ಮಾಡಿಸಬಹುದು. ಈಗಾಗಲೇ ತಾಲೂಕಿನ ಹಲವು ಶಾಲೆಗಳಲ್ಲಿ ಸಿಎಸ್‌ಆರ್ ಅನುದಾನದಡಿಯಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗಿವೆ.  ಕೆಲವಡೆ ಶಾಲೆಗಳಿಗೆ ಸುವ್ಯವಸ್ಥಿತವಾಗಿರುವ ಕಾಂಪೌಂಡ್ ವ್ಯವಸ್ಥೆಗಳಾಗಿವೆ. ಇದರ ಜತೆಗೆ ಸರ್ಕಾರ ಅಗತ್ಯವಿರುವ ಕಡೆ ಹೊಸ ಕಟ್ಟಡಗಳನ್ನು ನೀಡಿದಲ್ಲಿ ಮಕ್ಕಳ ಕಲಿಕೆಗೆ ಇನ್ನಷ್ಟು ಬಲ ದೊರೆಯಲಿದೆ.

ಗೋಡೆ ಬಿರುಕು ಬಿಟ್ಟಿರುವ ಚಿತ್ರ
ದಾಸ್ತಾನು ಕೊಠಡಿ ಮತ್ತು ತರಗತಿ ಕೊಠಡಿ ಚಿತ್ರ
ಶಾಲಾ ಚಿತ್ರ

ಅಗತ್ಯವಿರುವ ಹೊಸ ಕಟ್ಟಡಗಳ ಕುರಿತು ಎಲ್ಲ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಯನಗುಂಟೆ ಶಾಲೆ ಕಟ್ಟಡ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೊಸ ಕಟ್ಟಡ ಕಟ್ಟಲು ಆಗುತ್ತಿಲ್ಲ. ಶಾಲೆಗಾಗಿ ಸರ್ಕಾರಿ ಜಮೀನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ

– ಪದ್ಮನಾಭ್ ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಕೋಟೆ

ಕ್ಲಸರ್ ಹೆಸರು ಮತ್ತು ಮಕ್ಕಳ ಸಂಖ್ಯೆ, ಶಾಲೆಗಳ ಸಂಖ್ಯೆ

ಬೇಗೂರು ಕ್ಲಸ್ಟರ್;1272;12

ಸೂಲಿಬೆಲೆ ಕ್ಲಸ್ಟರ್;2428;18

ಟಿ.ಅಗ್ರಹಾರ ಕ್ಲಸ್ಟರ್;311;10

ಬೆಂಡಿಗಾನಹಳ್ಳಿ ಕ್ಲಸ್ಟರ್;1164;14

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.