ದೇವನಹಳ್ಳಿ: ನಗರದ ಎಸ್.ಎಲ್.ಎಸ್ ಆಂಗ್ಲ ಶಾಲೆ 10ನೇ ತರಗತಿಯ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಮದನ್ ಗೌಡ ಮರು ಮೌಲ್ಯಮಾಪನದ ನಂತರ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಆಡಳಿತ ಕಾರ್ಯದರ್ಶಿ ಡಿ.ಎಸ್. ಧನಂಜಯ ತಿಳಿಸಿದರು.
ಇಲ್ಲಿನ ಎಸ್.ಎಲ್.ಎಸ್ ಶಾಲೆಯಲ್ಲಿ ಮಾಹಿತಿ ನೀಡಿದ ಅವರು, 11 ವರ್ಷಗಳಿಂದ 10ನೇ ತರಗತಿಯಲ್ಲಿ ಶೇ 100 ರಷ್ಟು ಫಲಿತಾಂಶ ಶಾಲೆ ಪಡೆಯುತ್ತಿದೆ. ಈ ಬಾರಿಯೂ ಶೇ 100 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿ ಮದನ್ ಗೌಡಗೆ ಫಲಿತಾಂಶ ಪ್ರಕಟಗೊಂಡಾಗ 625 ಕ್ಕೆ 609 ಅಂಕಗಳು ಬಂದಿದ್ದವು ಎಂದರು.
ವಿದ್ಯಾರ್ಥಿಗೆ ಕೆಲವು ವಿಷಯಗಳಲ್ಲಿ ನಿರೀಕ್ಷಿತ ಅಂಕಗಳು ಬಂದಿರಲಿಲ್ಲ. ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಮರು ಮೌಲ್ಯಮಾಪನ ಮಾಡಿಸಿದಾಗ ಈ ಹಿಂದೆ ಇದ್ದ 91 ಅಂಕಗಳಿಗೆ ಪ್ರಸ್ತುತ 96 ಅಂಕ, ಸಮಾಜ ವಿಜ್ಞಾನದಲ್ಲಿ 97 ರ ಬದಲು 99ಕ್ಕೆ ಏರಿಕೆಯಾಗಿ ಒಟ್ಟು 616 (ಶೇ 98.56) ಅಂಕಗಳಿಸಿ ಜಿಲ್ಲೆಗೆ ನಾಲ್ಕನೇ ಸ್ಥಾನ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
ಸುಹಾಸ್ ರೆಡ್ಡಿ ವಿದ್ಯಾರ್ಥಿಯ ಆಂಗ್ಲ ಮತ್ತು ಸಮಾಜ ವಿಷಯದಲ್ಲಿ ಮರುಮೌಲ್ಯಮಾಪನ ಅರ್ಜಿ ಸಲ್ಲಿಸಲಾಗಿತ್ತು. ಎರಡು ವಿಷಯದಲ್ಲಿ ಹೆಚ್ಚುವರಿ 14 ಅಂಕಗಳು ದೊರಕಿವೆ. ದರ್ಶನ್ ಡಿ. ನರಗುಂದ ಎಂಬ ವಿದ್ಯಾರ್ಥಿ ವಿಜ್ಞಾನ ವಿಷಯದಲ್ಲಿ ಮರು ಮೌಲ್ಯಮಾಪನ ಮಾಡಿಸಿದಾಗ ಈ ಹಿಂದೆ ಇದ್ದ 88 ಅಂಕಕ್ಕೆ ಬದಲಾಗಿ 4 ಅಂಕ ಹೆಚ್ಚಳವಾಗಿ 92 ಅಂಕ ಬಂದಿದೆ ಎಂದು ಹೇಳಿದರು.
ಪರೀಕ್ಷಾ ಮಂಡಳಿಯು ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸಬೇಕು ಎಂಬ ಉದ್ದೇಶ ಒಂದೆಡೆಯಾದರೆ ಶಿಸ್ತುಬದ್ಧ ಮೌಲ್ಯಮಾಪಕರನ್ನು ನೇಮಕ ಮಾಡಿಲ್ಲ ಎಂದು ದೂರಿದರು. ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.