ಆನೇಕಲ್:ತಾಲ್ಲೂಕಿನ ವೀರಸಂದ್ರದಲ್ಲಿ ಕಾಂಟಿನೆಂಟಲ್ ಕಂಪನಿಯ ಟೆಕ್ನಿಕಲ್ ಸೆಂಟರ್ ಫಾರ್ ಇಂಡಿಯಾ ಹೊಸ ಕ್ಯಾಂಪಸ್ ಉದ್ಘಾಟನೆಗೊಂಡಿದೆ.
₹ 1 ಸಾವಿರ ಕೋಟಿ ಹೂಡಿಕೆಯೊಂದಿಗೆ 6,500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಉದ್ಘಾಟನೆ ನೆರವೇರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಆಟೊಮೊಬೈಲ್ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಂಶೋಧನೆ ಅಸ್ತ್ರವಾಗಿದೆ. ಬೆಂಗಳೂರಿನಲ್ಲಿ ಜಾಗತಿಕ ಮಟ್ಟದ ಸಂಶೋಧನಾ ಕೇಂದ್ರ ತೆರೆದಿರುವುದರಿಂದ ಹೆಚ್ಚಿನ ಉದ್ಯೋಗವಕಾಶ ದೊರೆಯಲಿವೆ ಎಂದು ಆಶಿಸಿದರು.
ತಂತ್ರಜ್ಞಾನದ ಬದಲಾವಣೆ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ. ಬೆಂಗಳೂರು ನಗರ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತಮ ಸ್ಥಳವಾಗಿದೆ. ನವೀನ ತಂತ್ರಜ್ಞಾನಕ್ಕೆ ಪ್ರತಿಭಾವಂತರನ್ನು ಗುರುತಿಸುವ ಜಾಗವಾಗಿದೆ. ಪ್ರತಿಭೆ ಮೂಲಕ ಸಮಾಜದಲ್ಲಿ ಬದಲಾವಣೆ ಬಯಸುವವರಿಗೆ ಬೆಂಗಳೂರು ಉತ್ತಮ ವೇದಿಕೆಯಾಗಿದೆ ಎಂದರು.
ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ದೊರೆಸ್ವಾಮಿ ಮಾತನಾಡಿ, ಭಾರತದ ಪ್ರಗತಿಪರ ಆಡಳಿತ, ಪ್ರಬಲವಾದ ಸ್ಥಳೀಯ ಪರಿಸರ ವ್ಯವಸ್ಥೆಯ ಕಾರಣದಿಂದ ಕಾಂಟಿನೆಂಟಲ್ ಹಲವಾರು ಮಹತ್ವದ ಆಕಾಂಕ್ಷೆಯೊಂದಿಗೆ ಸಂಶೋಧನೆಗಳತ್ತ ತೊಡಗಿದೆ ಎಂದರು.
ಭಾರತವು ಜಾಗತಿಕ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ವಿಶ್ವದಲ್ಲಿಯೇ ಉನ್ನತ ಸ್ಥಾನದಲ್ಲಿದೆ. ಜಾಗತಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಬೆಂಗಳೂರಿನಲ್ಲಿ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿವೆ. ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಂಟಿನೆಂಟಲ್ ಕಂಪನಿ ಕೆಲಸ ಮಾಡಲಿದೆ ಎಂದು ಹೇಳಿದರು.
ಕಾಂಟಿನೆಂಟಲ್ ಆಟೊಮೋಟಿವ್ ಟೆಕ್ನಿಕಲ್ ಸೆಂಟರ್ ಆಫ್ ಇಂಡಿಯಾ ಮುಖ್ಯಸ್ಥೆ ಲತಾ ಚೆಂಬ್ರಕಲಮ್ ಮಾತನಾಡಿ, ಆಟೊಮೊಬೈಲ್ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಸುವುದು ಸವಾಲಿನ ವಿಷಯ. ಈ ಕೇಂದ್ರದಲ್ಲಿ ಐದು ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗುತ್ತಾರೆ. ಇದರಿಂದ ಭಾರತದಲ್ಲಿ ಹೆಚ್ಚುತ್ತಿರುವ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಕ್ರೋಡೀಕರಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.