ದೊಡ್ಡಬಳ್ಳಾಪುರ: ಭಾರತದ ಅಂಚೆ ಇಲಾಖೆ 110 ವರ್ಷಗಳಿಂದ ನೀಡಿದ ಸೇವೆ ಅಪಾರವಾಗಿದೆ. ಅಂಚೆ ಸೇವೆಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಜನಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೇವೆ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಲೆಹರ್‍ಸಿಂಗ್ ಶಿರೋಯ ಅಭಿಪ್ರಾಯಪಟ್ಟರು.
ನಗರದ ಡಾ.ರಾಜ್‍ಕುಮಾರ್ ಕಲಾಮಂದಿರದಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೇವೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಅಂಚೆ ಇಲಾಖೆಗೆ ಮರುಜೀವ ನೀಡಿದ್ದಾರೆ. ಜನ್‍ಧನ್ ಯೋಜನೆ ನಂತರ ಸುಮಾರು 31ಕೋಟಿ ಖಾತೆ ತೆರೆದಿರುವುದು ಇತಿಹಾಸ ಎಂದು ಶ್ಲಾಘಿಸಿದರು.
ಇದೀಗ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಅಂಚೆ ಇಲಾಖೆ ಮೂಲಕ ಪ್ರಾರಂಭಿಸುತ್ತಿರುವುದು ಸಂತಸದ ವಿಚಾರ ಎಂದರು.
ಈ ಸೇವೆಗಳಿಂದ ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿಂಗ್ ಹಾಗೂ ಹಣಕಾಸಿನ ಸೇವೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಡಿವೈಎಸ್‍ಪಿ ಆರ್.ಮೋಹನ್ ಕುಮಾರ್ ಮಾತನಾಡಿ, ಮೊಬೈಲ್, ಇಂಟರ್ ನೆಟ್, ಕೊರಿಯರ್ ಮುಂತಾದ ಸೌಲಭ್ಯ ಇಲ್ಲದ ಕಾಲದಲ್ಲಿ ಪೋಸ್ಟ್‌ಮ್ಯಾನ್‌ಗಾಗಿ ಕಾಯುತ್ತಿದ್ದ ದಿನಗಳಿದ್ದವು ಎಂದು ಅಂಚೆಯವರೊಂದಿಗಿನ ಭಾವನಾತ್ಮಕ ಸಂಬಂಧದ ನೆನಪು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆ ವತಿಯಿಂದ ಅಂಚೆ ಇಲಾಖೆ ಪರಿಚಯದ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಹೊಸದಾಗಿ ಪ್ರಾರಂಭಿಸಿದ ಪೋಸ್ಟ್ ಪೇಮೆಂಟ್ಸ್ ಬ್ಯಾಕಿಂಗ್ ಸೇವೆಗಳ ಬಗ್ಗೆ ವಿವರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಚಾಲನೆ ನೀಡಿದ ಸಮಾರಂಭವನ್ನು ನೇರ ಪ್ರಸಾರ ಮಾಡಲಾಯಿತು. ಅಂಚೆ ಇಲಾಖೆ ವತಿಯಿಂದ ಹೊರ ತರಲಾಗಿರುವ ಕ್ಯೂಆರ್ ಸ್ಮಾರ್ಟ್ ಕಾರ್ಡ್‌ಗಳನ್ನು ಹೊಸ ಖಾತೆದಾರರಿಗೆ ವಿತರಣೆ ಮಾಡಲಾಯಿತು.
ಅಂಚೆ ಕಚೇರಿ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜನರಲ್ ವಿ.ಕೆ.ಮೋಹನ್, ಪೋಸ್ಟ್ ಮಾಸ್ಟರ್ ರಮೇಶ್ ಬಾಬು, ಭಾರತೀಯ ಅಂಚೆ ಪಾವತಿ ಬ್ಯಾಂಕ್‍ನ ವ್ಯವಸ್ಥಾಪಕ ಗಿರೀಶ್ ಕುಮಾರ್, ಮಮತಾ, ಪೌರಾಯುಕ್ತ ಆರ್.ಮಂಜುನಾಥ್, ನಗರಸಭೆ ಸದಸ್ಯ ಎಸ್.ಎ.ಭಾಸ್ಕರ್, ಶಿವಕುಮಾರ್ ಹಾಗೂ ಅಂಚೆ ಇಲಾಖೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.