ವಿಜಯಪುರ: ವಿವಿಧ ಸಂಸ್ಕೃತಿ, ಧಾರ್ಮಿಕತೆಯಲ್ಲಿ ಅಪಾರವಾದ ಗೌರವ ಮತ್ತು ಬದ್ಧತೆ ಇರುವ ದೇಶದಲ್ಲಿ ವೈಕುಂಠ ಏಕಾದಶಿಗೆ ವಿಶೇಷವಾದ ಸ್ಥಾನವಿದೆ. ಯುವಜನರು ಧಾರ್ಮಿಕತೆಯಲ್ಲಿ ಒಲವು ಬೆಳೆಸಿಕೊಳ್ಳಬೇಕಾಗಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಇಲ್ಲಿನ ಬಲಿಜಪೇಟೆಯಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಅವರು, ವೈಕುಂಠ ಏಕಾದಶಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿರಿಯರ ಹಾದಿಯಲ್ಲಿ ಮುನ್ನಡೆಯಬೇಕು. ವೈಕುಂಠ ಏಕಾದಶಿಗೆ ವಿಶಿಷ್ಟವಾದ ಹಿನ್ನೆಲೆ ಇದೆ. ವೈಕುಂಠದ ದ್ವಾರ ತೆರೆದಿರುತ್ತದೆ ಎನ್ನುವ ನಂಬಿಕೆ ಹಿಂದೂ ಸಂಸ್ಕೃತಿಯಲ್ಲಿದೆ. ದಕ್ಷಿಣ ದ್ವಾರದಿಂದ ಉತ್ತರಾಭಿಮುಖವಾಗಿ ಬಂದು ದೇವರ ದರ್ಶನ ಪಡೆಯುವುದರಿಂದ ಪಾಪ ಕಳೆಯುತ್ತದೆ ಎಂಬುದು ಪ್ರತೀತಿ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದರು.
ಪೌರತ್ವ ತಿದ್ದುಪಡಿ ಕಾಯಿದೆ
ಸಿಎಎ ಕಾಯಿದೆಯಿಂದ ದೇಶದಲ್ಲಿ ಯಾವುದೇ ಸಮುದಾಯಕ್ಕೂ ತೊಂದರೆ ಆಗುವುದಿಲ್ಲ. ವಿನಾಕಾರಣ ರಾಜಕೀಯ ದುರುದ್ದೇಶದಿಂದ ವಿರೋಧಿಸಲಾಗುತ್ತಿದೆ. ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ನಡೆದಿದೆ. ಮುಸ್ಲಿಂ ಸಮುದಾಯದಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಮುಖಂಡ ಬಲಮುರಿ ಶ್ರೀನಿವಾಸ್ ಮಾತನಾಡಿ, ಬಲಿಜ ಭವನದ ಅಭಿವೃದ್ಧಿಗಾಗಿ ಅನುದಾನ ಅವಶ್ಯವಿದೆ. ಸಂಸದರ ನಿಧಿಯಿಂದ ಅನುದಾನ ನೀಡಬೇಕೆಂದು ಎಂದು ಮನವಿ ಮಾಡಿದರು.
ಜಾರ್ಖಂಡ್‌ನಲ್ಲಿ ಬಿಜೆಪಿಗೆ ಬಹುಮತ ಸಿಗಲಿಲ್ಲ. ಆದರೂ ಅಲ್ಲಿನ ಮುಖ್ಯಮಂತ್ರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಲಿಲ್ಲವೇ ? ಅದನ್ನು ಬಿಟ್ಟು ಸೋಲಿಗೆ ಬಚ್ಚೇಗೌಡ ಕಾರಣ ಎಂದರೆ ನಾನೇನು ಮಾಡಲು ಸಾಧ್ಯ. ಪಕ್ಷದ ಅಧ್ಯಕ್ಷರಾಗಲಿ, ಮುಖಂಡರಾಗಲಿ ನನ್ನನ್ನು ಈ ವಿಚಾರದಲ್ಲಿ ಸಂಪರ್ಕ ಮಾಡಿಲ್ಲ. ಎಂಟಿಬಿ ನಾಗರಾಜ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದರು.
ಶಾಸಕರಿಗೆ ಸಚಿವ ಸ್ಥಾನ
ಬಿಜೆಪಿ ರಾಷ್ಟ್ರೀಯ ಪಕ್ಷ. ಶಾಸಕರನ್ನು ಸಚಿವರನ್ನಾಗಿ ಮಾಡುವ ವಿಚಾರದಲ್ಲಿ ಪಕ್ಷದ ಮುಖ್ಯಮಂತ್ರಿ ಕೂಡ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದರು.
ಕೋಲಾರದಲ್ಲಿ ಲಾಠಿ ಚಾರ್ಜ್
ತಪ್ಪು ಕಲ್ಪನೆಯಿಂದ ಜನರ ಮೇಲೆ ಪೊಲೀಸರು ಲಾಠಿ ಮಾಡಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದರು.
ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್, ಎಂಜಿನಿಯರ್‌ಗಳಾದ ಗಂಗಾಧರ್, ಸುಪ್ರಿಯಾ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಕೆಪಿಸಿಸಿ ಸದಸ್ಯ ಸಿ.ಕೆ.ರಾಮಚಂದ್ರಪ್ಪ, ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಎಸ್.ರವಿಕುಮಾರ್, ಸಾಗರ್, ಬಲಿಜ ಸಂಘದ ಅಧ್ಯಕ್ಷ ಮಹಾತ್ಮಾಂಜನೇಯ, ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.