ADVERTISEMENT

ದೇವನಹಳ್ಳಿ | ಪ್ರತಿ ಕ್ವಿಂಟಾಲ್ ರಾಗಿಗೆ ₹4,290 ಬೆಂಬಲ ಬೆಲೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:12 IST
Last Updated 16 ನವೆಂಬರ್ 2024, 15:12 IST
ದೇವನಹಳ್ಳಿಯ ಬೀರಸಂದ್ರದಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ನಡೆದ ರೈತರಿಂದ ರಾಗಿ ಖರೀದಿಸಲು ಪೂರ್ವ ಸಿದ್ಧತಾ ಕ್ರಮಗಳ ಮೊದಲನೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.
ದೇವನಹಳ್ಳಿಯ ಬೀರಸಂದ್ರದಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ನಡೆದ ರೈತರಿಂದ ರಾಗಿ ಖರೀದಿಸಲು ಪೂರ್ವ ಸಿದ್ಧತಾ ಕ್ರಮಗಳ ಮೊದಲನೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.   

ದೇವನಹಳ್ಳಿ: ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಡಿ.1 ರಿಂದ ಶುರುವಾಗಲಿದ್ದು, ನೋಂದಣಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್. ಶಿವಶಂಕರ್  ಸೂಚಿಸಿದರು.

ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ರೈತರಿಂದ ರಾಗಿ ಖರೀದಿ ಪೂರ್ವ ಸಿದ್ಧತಾ ಕ್ರಮಗಳ ಮೊದಲನೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.

ಪ್ರತಿ ಕ್ವಿಂಟಾಲ್ ರಾಗಿಗೆ ₹ 4,290 ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದೆ. ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣ ಏಜೆನ್ಸಿಗಳು ಪ್ರತಿ ತಾಲ್ಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದರು.

ADVERTISEMENT

ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಪ್ರಕ್ರಿಯೆಗೆ ನಿಗದಿತ ಸ್ಥಳಗಳನ್ನು ಗುರುತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಖರೀದಿ ಕೇಂದ್ರಗಳ ನೋಂದಣಿಗೆ ಅವಶ್ಯಕತೆ ಇರುವ ಟೇಬಲ್, ಚೇರ್, ಕಂಪ್ಯೂಟರ್‌ಗಳು, ವಿದ್ಯುತ್ ಸಂಪರ್ಕ, ಇಂಟರ್‌ನೆಟ್‌, ತೂಕದ ಯಂತ್ರ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.

ರೈತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿ, ಡಿ.1 ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು, ಜನವರಿಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಶುರುವಾಗಲಿದೆ. ಹಾಗಾಗಿ ರೈತರಿಂದ ಖರೀದಿಸಿದ ರಾಗಿಯನ್ನು ಕ್ರೋಢಿಕರಿಸಿ ಶೇಖರಿಸಲು ಉಗ್ರಾಣಗಳು ವ್ಯವಸ್ಥಿತ ಗುಣಮಟ್ಟದಲ್ಲಿ ಇದೆಯೇ ಎಂದು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಹೆಚ್ಚುವರಿ ಉಗ್ರಾಣಗಳನ್ನು ತೆರೆಯಿರಿ ಎಂದರು.

ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಲ್ಲಿ ನೋಂದಾಯಿಸಿಕೊಂಡು, ಫ್ರೂಟ್ಸ್ ಐಡಿ ಪಡೆದಿರಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಫ್ರೂಟ್ಸ್ ಐಡಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಜಿ.ಶಂಕರಮೂರ್ತಿ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ತನ್ವೀರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ಉಪನಿರ್ದೇಶಕಿ ಗಾಯಿತ್ರಿ, ಜಿಲ್ಲಾ ಉಗ್ರಾಣ ಕೇಂದ್ರಗಳ ವ್ಯವಸ್ಥಾಪಕರು ಮತ್ತು ಇತರರು ಉಪಸ್ಥಿತರಿದ್ದರು.

ರಾಗಿ ನೋಂದಣಿ: ಖರೀದಿ ಕೇಂದ್ರಗಳ ವಿವರ

ನೆಲಮಂಗಲ ತಾಲ್ಲೂಕು: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ, ನೆಲಮಂಗಲ ತಾಲ್ಲೂಕು.

ದೊಡ್ಡಬಳ್ಳಾಪುರ ತಾಲ್ಲೂಕು: ರೈತ ಭವನ ಕೇಂದ್ರ, ಎಂಪಿಎಂಸಿ ಯಾರ್ಡ್, ದೊಡ್ಡಬಳ್ಳಾಪುರ.

ದೇವನಹಳ್ಳಿ ತಾಲ್ಲೂಕು: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕುರುಬರ ದೊಡ್ಡಿ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ, ದೇವನಹಳ್ಳಿ.

ಹೊಸಕೋಟೆ ತಾಲ್ಲೂಕು: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್, ಮಾಲೂರು ರಸ್ತೆ, ಹೊಸಕೋಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.