ಪ್ರಜಾವಾಣಿ ವಾರ್ತೆ
ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಕಾನೂನು ಹಾಗೂ ಸುರಕ್ಷಿತವಾಗಿ ಕಲ್ಲುಗಣಿಗಾರಿಕೆ ನಡೆಯುವಂತೆ ತುರ್ತಾಗಿ ನಿಗಾವಹಿಸಬೇಕು ಎಂದು ಶಾಸಕ ಟಿ.ವೆಂಕಟರಮಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿ, ಈಚೆಗಷ್ಟೇ ಶಿವಮೊಗ್ಗ ಸಮೀಪದ ಕಲ್ಲುಗಣಿಗಾರಿಕೆಯಲ್ಲಿ ನಡೆದ ಸ್ಫೋಟದಿಂದ ಹಲವು ಜನರ ಸಾವಿಗೆ ಕಾರಣವಾಗಿರುವುದು ಅಲ್ಲದೆ ಗಣಿಗಾರಿಕೆ ಸುತ್ತಲಿನ ಗ್ರಾಮಗಳ ಜನರ ಬದುಕು ಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಗಣಿ
ಗಾರಿಕೆ ನಡೆಸುತ್ತಿರುವ ಸ್ಥಳಗಳಿಗೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸುರಕ್ಷಿತಾ ಕ್ರಮ, ಗಣಿಗಾರಿಕೆ ನಡೆಸುತ್ತಿರುವ ಪ್ರದೇಶದ ಒತ್ತುವರಿ ಕುರಿತು ಪರಿಶೀಲನೆ ನಡೆಸಬೇಕು. ಸಾಸಲು ಹೋಬಳಿ ಮಂಗಳ ಫಾರಂ ಹಾಗೂ ಗ್ರೀನ್ ವ್ಯಾಲಿ ಮಾಲೀಕರು ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ಸರ್ವೆ ನಡೆಸುವಂತೆ ಸೂಚನೆ
ನೀಡಿದರು.
ಸಭೆಯಲ್ಲಿ ಹಾಜರಿದ್ದ ಉಪವಿಭಾಗಾಧಿಕಾರಿ ಅರುಳ್‌ಕುಮಾರ್ ಮಾತನಾಡಿ, ಶಿವಮೊಗ್ಗ ಜಿಲ್ಲೆ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟ ನಡೆದ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಸುರಕ್ಷಿತ ಕುರಿತಂತೆ ಪೊಲೀಸ್,ಕಂದಾಯ ಅಧಿಕಾರಿಗಳ ತುರ್ತು ಸಭೆ ನಡೆಸಲಾಗಿದೆ. ಸದ್ಯದಲ್ಲೇ ಕಲ್ಲು ಗಣಿಗಾರಿಕೆ ಪರವಾನಗಿ ಪಡೆದಿರುವ ಮಾಲೀಕರ ಸಭೆ ನಡೆಸಲಾಗುವುದು. ಸ್ಫೋಟಕ ಬಳಸುವ, ಸಂಗ್ರಹಿಸುವ ಕುರಿತಂತೆ ಸರ್ಕಾರದ ಮಾರ್ಗದರ್ಶಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಸಭೆಯಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಇಇಒ ಮುರುಡಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಉಪಾಧ್ಯಕ್ಷೆ ಯಶೋಧ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮರಾಮಲಿಂಗಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.