ADVERTISEMENT

ಹೊಸಕೋಟೆ | ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 4:25 IST
Last Updated 4 ಜುಲೈ 2024, 4:25 IST
ಸಾರ್ವಜನಿಕ ಆಸ್ಪತ್ರೆ. ಹೊಸಕೋಟೆ
ಸಾರ್ವಜನಿಕ ಆಸ್ಪತ್ರೆ. ಹೊಸಕೋಟೆ   

ಹೊಸಕೋಟೆ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 85 ವಿವಿಧ ಹುದ್ದೆ ಮಂಜೂರಾಗಿದೆ. ಆದರೆ ಅದರಲ್ಲಿ 45 ಹುದ್ದೆ ಮಾತ್ರ ಭರ್ತಿಯಾಗಿದ್ದು, 40 ಹುದ್ದೆ ಖಾಲಿ ಉಳಿದಿವೆ. ಒಂದು  ವೈದ್ಯಾಧಿಕಾರಿ, ಶುಶ್ರೂಷ ಅಧೀಕ್ಷಕರು ದರ್ಜೆ –2ರ ಒಂದು ಹುದ್ದೆ, ಹಿರಿಯ ಪ್ರಯೋಗಶಾಲಾ ತಂತ್ರಜ್ಞ, ನೇತ್ರಾಧಿಕಾರಿ, ಎಫ್‌ಡಿಎ, ಕ್ಲರ್ಕ್ ಕಂ ಟೈಪಿಸ್ಟ್‌ ತಲಾ ಒಂದು ಹುದ್ದೆ, ವಾಹನ ಚಾಲಕರು –2, 31 ಡಿ ಗ್ರೂಪ್ ನೌಕರರ ಹುದ್ದೆ ಸೇರಿ ಒಟ್ಟು 40 ಹುದ್ದೆಗಳು ಖಾಲಿ ಇವೆ.

85 ‌ಸಿಬ್ಬಂದಿಗಳು ಮಾಡಬೇಕಿದ್ದ ಕೆಲಸವನ್ನು 45 ಸಿಬ್ಬಂದಿ ಮಾಡುತ್ತಿದ್ದಾರೆ. ಇದರಿಂದ ಸಿಬ್ಬಂದಿಗಳ ಮೇಲೆ ಒತ್ತಡ ಆಗುತ್ತಿದೆ. ಅಲ್ಲದೆ ಎಲ್ಲ ರೋಗಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಲವು ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವುದು ರೋಗಿಗಳ ಕುಟುಂಬಸ್ಥರ ದೂರು.

ADVERTISEMENT

ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಬಹುಮುಖ್ಯ ಕೆಲಸ. ಇದಕ್ಕೆ ಬಹು ಮುಖ್ಯವಾಗಿ ಬೇಕಿರುವುದು ಡಿ ಗ್ರೂಪ್ ನೌಕರರು. ಆದರೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಒಟ್ಟ 33 ಡಿ ಗ್ರೂಪ್‌ ನೌಕರರ ಹುದ್ದೆ ಮಂಜೂರು ಆಗಿದ್ದರೂ ಭರ್ತಿಯಾಗಿರುವುದು ಕೇವಲ ಎರಡು
ಮಾತ್ರ. ಉಳಿದಂತೆ 31 ನೌಕರರ ಹುದ್ದೆ ಖಾಲಿಯಿದೆ. ಇದರಿಂದ ಆಸ್ಪತ್ರೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ ಎನ್ನುತ್ತಾರೆ ರೋಗಿಗಳು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 31 ಡಿ ಗ್ರೂಪ್ ನೌಕರರ ಕೊರತೆ ಇರುವುದು ನಿಜಕ್ಕೂ ವಿಷಾದನೀಯ. ಆದಷ್ಟು ಬೇಗ ಸಿಬ್ಬಂದಿ ಕೊರತೆ ನೀಗಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಭೀಮ್ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಎಚ್ಚರಿಸಿದ್ದಾರೆ.

ಶೀಘ್ರವೇ ನೇಮಕ
ಆಸ್ಪತ್ರೆಯಲ್ಲಿ 33 ಡಿ ಗ್ರೂಪ್ ನೌಕರರಲ್ಲಿ 31 ಹುದ್ದೆ ಭರ್ತಿಯಾಗಿಲ್ಲ. ಹೀಗಾಗಿ ಆಸ್ಪತ್ರೆ ನಿರ್ವಹಣೆಯಲ್ಲಿ ಸಮಸ್ಯೆಯಾಗಿದೆ. ನೇಮಕಕ್ಕೆ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಸಿಬ್ಬಂದಿ ಆಯ್ಕೆಗೆ ಜಿಲ್ಲಾಧಿಕಾರಿ ಅನುಮತಿ ನೀಡಲಿದ್ದಾರೆ. ಶೀಘ್ರವೇ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಡಾ.ಸತೀಶ್ ಆಡಳಿತ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.