ADVERTISEMENT

ದೊಡ್ಡಬಳ್ಳಾಪುರ | ನೀಗದ ಶಿಕ್ಷಕರ ಕೊರತೆ; 10 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ

ನಟರಾಜ ನಾಗಸಂದ್ರ
Published 2 ಜೂನ್ 2024, 4:15 IST
Last Updated 2 ಜೂನ್ 2024, 4:15 IST
ದೊಡ್ಡಬಳ್ಳಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶುಕ್ರವಾರ ಮೊದಲ ದಿನ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು
ದೊಡ್ಡಬಳ್ಳಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶುಕ್ರವಾರ ಮೊದಲ ದಿನ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆದು, ಶಾಲೆಗಳು ಆರಂಭಗೊಂಡಿವೆ. ಆದರೆ ಶಿಕ್ಷಕರ ಕೊರತೆ ನೀಗಿಲ್ಲ. ಇದರ ನಡುವೆಯೇ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ ಆರಂಭಗೊಂಡಿದೆ.

ತಾಲ್ಲೂಕಿನಲ್ಲಿ 326 ಸರ್ಕಾರಿ ಪ್ರಾಥಮಿಕ ಹಾಗೂ 17 ಸರ್ಕಾರಿ ಪ್ರೌಢ ಶಾಲೆ ಶಾಲೆಗಳಿವೆ. 2023-24ನೇ ಸಾಲಿನಲ್ಲಿ 1ರಿಂದ 7ನೇ ತರಗತಿಯ ಸರ್ಕಾರಿ ಪ್ರಾಥಮಿ ಶಾಲೆಗಳಲ್ಲಿ 12,432 ವಿದ್ಯಾರ್ಥಿಗಳು ಹಾಗೂ 8 ರಿಂದ 10ನೇ ತರಗತಿಯ ಪ್ರೌಢ ಶಾಲೆಯಲ್ಲಿ 4,741 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಇಷ್ಟು ವಿದ್ಯಾರ್ಥಿಗಳಿಗೆ ಇರುವುದು ಸಾವಿರ ಶಿಕ್ಷಕರು ಇರಬೇಕಿತ್ತು. ಆದರೆ ಇರುವುದು 800 ಶಿಕ್ಷಕರು ಮಾತ್ರ. 100 ಶಿಕ್ಷಕರ ನೇಮಕವಾಗಿಲ್ಲ.

ತಾಲ್ಲೂಕಿನ ಸಾಸಲು ಹಾಗೂ ತೂಬಗೆರೆ ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಈ ಹಿಂದಿನಿಂದಲೂ ಇದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಪ್ರಥಮ ಆದ್ಯತೆಯ ಮೇರೆಗೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ADVERTISEMENT

ತಾಲ್ಲೂಕು ಕೇಂದ್ರದಿಂದ ದೂರ ಇರುವ ಹೋಬಳಿ ಹಾಗೂ ಸಾರಿಗೆ ಸೌಲಭ್ಯಗಳ ಕೊರತೆಯಿಂದ ಈ ಭಾಗದ ಶಾಲೆಗಳಿಗೆ ಶಿಕ್ಷಕರು ಬರಲು ಹಿಂಜರಿಯುತ್ತಿದ್ದಾರೆ. ಈ ಎರಡೂ ಹೋಬಳಿಯಲ್ಲೇ ಆರ್ಥಿಕವಾಗಿ ಹಿಂದುಳಿದ ಕುಂಟುಂಬಗಳು ಹೆಚ್ಚಾಗಿವೆ. ಹೀಗಾಗಿ  ಇಲ್ಲಿನ ಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿ ತುಂಬಬೇಕು ಎಂದು ಸಾಸಲು ಹೋಬಳಿಯ ಹೊಸಕೋಟೆ ಗ್ರಾಮದ ಮಲ್ಲಯ್ಯ ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಆಯ್ಕೆಯಾಗಿರುವ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಸರ್ಕಾರಿ ಶಾಲೆಗಲ್ಲಿಯೇ ಶಿಕ್ಷಕರ ಕೊರತೆ ಇದೆ. ಈ ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದೆ. ಸಚಿವರು ತುರ್ತು ಗಮನ ವಹಿಸುವ ಮೂಲಕ 2024-25ನೇ ಶೈಕ್ಷಣಿಕ ವರ್ಷದಲ್ಲೇ ಅಗತ್ಯ ಇರುವ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ತೂಬಗೆರೆ ಹೋಬಳಿ ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ.

ಶಿಕ್ಷಕರೇ ಇಲ್ಲದ ಶಾಲೆಗಳು

ತಾಲ್ಲೂಕಿನ 10 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲದೆ ಬೇರೆ ಶಾಲೆಯ ಮುಖ್ಯ ಶಿಕ್ಷಕರಿಗೆ ಹಚ್ಚುವರಿ ಹೊಣೆ ವಹಿಸಲಾಗಿದೆ. ಶಿಕ್ಷಕರೇ ಇಲ್ಲದ ಶಾಲೆಗಳ ಸಂಖ್ಯೆಯಲ್ಲೂ ಸಹ ಸಾಸಲು ಹೋಬಳಿಯಲ್ಲಿಯೇ ಮುಂದೆ ಇದೆ. ಬನಕೇನಹಳ್ಳಿ ಅಮಲಗುಂಟೆ ಗರಿಕೇನಹಳ್ಳಿ ಕೊಟ್ಟಿಗೆಮಾಚೇನಹಳ್ಳಿ ಮಲ್ಲಸಂದ್ರ ಡಿ.ವಿ.ತಿಪ್ಪಯ್ಯನಪಾಳ್ಯ ಶಾಲೆಗಳಲ್ಲಿ ಒಬ್ಬರು ಸಹ ಕಾಯಂ ಶಿಕ್ಷಕರು ಇಲ್ಲ. ಈ ಶಾಲೆಗಳ ಪಕ್ಕದ ಗ್ರಾಮದಲ್ಲಿನ ಶಾಲೆಯ ಶಿಕ್ಷಕರಿಗೆ ಹೆಚ್ಚುವರಿಯಾಗಿ ಹೊಣೆ ವಹಿಸಲಾಗಿದೆ. ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಸಮಸ್ಯೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಕ್ಷೇತ್ರದವಾದ ತೂಬಗೆರೆ ಹೋಬಳಿಯ ಬಾಲೇನಹಳ್ಳಿ ಚನ್ನಾಪುರ ಕಲ್ಲುಕೋಟೆ ಸರ್ಕಾರಿ ಶಾಲೆಗಳಲ್ಲು ಕಾಯಂ ಶಿಕ್ಷಕರು ಇಲ್ಲ. ಮಧುರೆ ಹೋಬಳಿಯ ಬೈರಸಂದ್ರ ಗ್ರಾಮದ ಶಾಲೆಯಲ್ಲೂ ಕಾಯಂ ಶಿಕ್ಷಕರು ಇಲ್ಲ. ಆದರೆ ನಗರ ಹಾಗೂ ನಗರದ ಸುತ್ತಲಿನ ಕಸಬಾ ಹೋಬಳಿಯ ಶಾಲೆಗಳಲ್ಲಿ ಕಾಯಂ ಶಿಕ್ಷರು ಇದ್ದಾರೆ. ಶಿಕ್ಷಕರ ಕೊರತೆಯು ಇಲ್ಲ. ಈ ತಾರತಮ್ಯವನ್ನು ನಿವಾರಿಸಬೇಕು ಎನ್ನುವುದು ಪೋಷಕರ ಆಗ್ರಹ.

ಅಂಕಿ ಅಂಶ

326: ಸರ್ಕಾರಿ ಪ್ರಾಥಮಿಕ ಶಾಲೆ

17: ಸರ್ಕಾರಿ ಪ್ರೌಢ ಶಾಲೆ

12,432: 1–7ನೇ ತರಗತಿ ವಿದ್ಯಾರ್ಥಿಗಳು

4,741: 8–10ನೇ ತರಗತಿ ವಿದ್ಯಾರ್ಥಿಗಳು

800: ಇರುವ ಶಿಕ್ಷಕರು

100: ಶಿಕ್ಷಕರ ಕೊರತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.