ADVERTISEMENT

ಆರ್‌ಟಿಜಿಎಸ್‌ ಮೂಲಕ ಲಂಚದ ಹಣ: ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 18:30 IST
Last Updated 28 ನವೆಂಬರ್ 2020, 18:30 IST
   

ದೊಡ್ಡಬಳ್ಳಾಪುರ:‘ಈ ಹಿಂದೆ ಯಡಿಯೂರಪ್ಪ ಚೆಕ್‌ ಮೂಲಕ ಲಂಚ ಪಡೆಯುತ್ತಿದ್ದರು. ಈಗ ಅವರ ಪುತ್ರ ವಿಜಯೇಂದ್ರ ಆರ್‌ಟಿಜಿಎಸ್‌ ಮೂಲಕ ಲಂಚದ ಹಣ ಪಡೆಯುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ಆಯೋಜಿಸಿದ್ದ ನೇಕಾರರ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು,‘ಕೊರೊನಾ ಸಮಯದಲ್ಲಿ ವೈದ್ಯಕೀಯ ಪರಿಕರಗಳ ಖರೀದಿಗೆ ₹4.5ಕೋಟಿ ಖರ್ಚಾಗಿದೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ₹2.5 ಕೋಟಿ ಲಂಚದ ಹಣ ಸೇರಿದೆ’ ಎಂದರು.

‘ಅಧಿವೇಶದಲ್ಲಿಈ ಬಗ್ಗೆ ಪ್ರಶ್ನೆ ಮಾಡಿದ್ದರೂ ಸರ್ಕಾರ ಉತ್ತರ ನೀಡಲಿಲ್ಲ. ಹಾಗೆಯೇ ರಾಜ್ಯದ ಹಲವು ಸಮಸ್ಯೆಗಳ ಕುರಿತು ವಿರೋಧ ಪಕ್ಷದ ನಾಯಕನಾಗಿಮುಖ್ಯಮಂತ್ರಿಗೆ ಪತ್ರ ಬರೆದಿರುವೆ. ಆದರೆ, ಅದಕ್ಕೂ ಉತ್ತರ ಬಂದಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

ADVERTISEMENT

ಜನರು ಉತ್ತರ ನೀಡುತ್ತಾರೆ: ‘ರಾಜ್ಯದಲ್ಲಿ ದೌರ್ಭಾಗ್ಯ ಆಡಳಿತ ಯಾರು ನೀಡುತ್ತಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಜನ ನಿರ್ಧರಿಸುತ್ತಾರೆ’ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಅವರಿಗೆ ತಿರುಗೇಟು ನೀಡಿದರು.

‘ಸಿದ್ದರಾಮಯ್ಯ ಸಾಲ ಮಾಡಿ ಎಲ್ಲ ಭಾಗ್ಯಗಳನ್ನು ಕೊಟ್ಟು ಕರ್ನಾಟಕಕ್ಕೆ ದೌರ್ಭಾಗ್ಯ ತಂದರು’ ಎಂದು ಪ್ರತಾಪ ಸಿಂಹ ಟೀಕಿಸಿದ್ದರು.

ಬಾಕ್ಸ್

ಖಜಾನೆ ಖಾಲಿಯಾದಾಗ ಜಾತಿಗೊಂದು ನಿಗಮ ಬೇಕಿತ್ತಾ?

‘ವೃದ್ಧಾಪ್ಯ ವೇತನ, ಪಿಂಚಣಿ ನೀಡಲು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲದ ಸ್ಥಿತಿಯಲ್ಲಿ ಜಾತಿಗೊಂದು ನಿಗಮ ರಚನೆಯ ಅಗತ್ಯವಾದರೂ ಏನಿತ್ತು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೊಕ್ಕಸ ಖಾಲಿಯಾದ ಕಾರಣ ಸರ್ಕಾರ ₹90 ಸಾವಿರ ಕೋಟಿ ಸಾಲ ಮಾಡಲು ಹೊರಟಿದೆ ಎಂದು ಅವರು ಲೇವಡಿ ಮಾಡಿದರು.

‘ಲಾಕ್‌ಡೌನ್‌ ನಂತರ ರಾಜ್ಯದಲ್ಲಿ 14 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಇದುವರೆಗೂ ಯಾರೊಬ್ಬರಿಗೂ ಪರಿಹಾರವ ನೀಡಿಲ್ಲ.ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಘೋಷಿಸಿದ ಪ್ಯಾಕೆಜ್‌ ಭರವಸೆಯಾಗಿಯೇ ಉಳಿದಿವೆ ಎನ್ನುವುದು ನೇಕಾರರ ಕುಟುಂಬಗಳನ್ನು ಭೇಟಿ ಮಾಡಿದ ನಂತರ ಸಾಬೀತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.