ADVERTISEMENT

ದೊಡ್ಡಬಳ್ಳಾಪುರ: ಬೆಟ್ಟದಂತೆ ಬೆಳೆಯುತ್ತಿದೆ ಕಸದ ರಾಶಿ

ಕಸ ವಿಲೇವಾರಿಗೆ ವಿಂಗಡಣೆಯದ್ದೆ ದೊಡ್ಡ ಸವಾಲು । ಕೆಲವೇ ವರ್ಷದಲ್ಲಿ ಭರ್ತಿಯಾಗಲಿದೆ ಕಸ ಸಂಸ್ಕರಣ ಘಟಕ

ನಟರಾಜ ನಾಗಸಂದ್ರ
Published 22 ಜುಲೈ 2024, 6:53 IST
Last Updated 22 ಜುಲೈ 2024, 6:53 IST
ದೊಡ್ಡಬಳ್ಳಾಪುರ ನಗರಸಭೆ ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕದಲ್ಲಿ ಬೆಟ್ಟದ ರಾಶಿ
ದೊಡ್ಡಬಳ್ಳಾಪುರ ನಗರಸಭೆ ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕದಲ್ಲಿ ಬೆಟ್ಟದ ರಾಶಿ   

ದೊಡ್ಡಬಳ್ಳಾಪುರ: ಇದೇ ವೇಗದಲ್ಲಿ ಕಸದ ರಾಶಿ ಬೆಳೆಯುತ್ತ ಹೋದರೆ ಈಗ ವಡ್ಡರಪಾಳ್ಯ ಗ್ರಾಮದ ಸಮೀಪ 15 ಎಕರೆಯಷ್ಟು ವಿಸ್ತೀರ್ಣದ ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕ ಕಲವೇ ವರ್ಷಗಳಲ್ಲಿ ಭರ್ತಿಯಾಗಲಿದೆ!.

ಮನೆಯಿಂದಲೇ ಹಸಿ–ಒಣ ತ್ಯಾಜ್ಯವನ್ನು ವಿಗಂಡಿಸಿ ಕೊಡಬೇಕೆಂದು ಸರ್ಕಾರ ಅರಿವು ಮೂಡಿಸುತ್ತಿದ್ದರೂ, ಜನ ಕಸವನ್ನು ಒಟ್ಟಿಗೆ ಸುರಿಯುತ್ತಿದ್ದಾರೆ. ಇದರಿಂದ ಕಸ ಸಂಸ್ಕರಣ ಘಟಕದಲ್ಲಿ ತ್ಯಾಜ್ಯ ವಿಗಂಡನೆಯಾಗದ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ.

ನಗರಸಭೆಯಲ್ಲಿ 31 ವಾರ್ಡ್‌ಗಳಲ್ಲಿದ್ದು, ವ್ಯಾಪ್ತಿಯಲ್ಲಿ ಪ್ರತಿ ದಿನ ಸುಮಾರು 35ರಿಂದ 40 ಟನ್‌ವರೆಗೆ ಕಸ ಸಂಗ್ರಹವಾಗುತ್ತಿದೆ. ಇದಕ್ಕಾಗಿಯೇ ಗುತ್ತಿಗೆ ಮತ್ತು ಕಾಯಂ ಸೇರಿ 205 ಪೌರಕಾರ್ಮಿಕರು ಪ್ರತಿ ದಿನ ಕೆಲಸ ಮಾಟುತ್ತಿದ್ದಾರೆ.

ADVERTISEMENT

ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ 31 ಆಟೊ, ಮನೆಗಳಿಂದ ಸಂಗ್ರಹ ಆಗುವ ಹಾಗೂ ರಸ್ತೆ ಬದಿಗಳಲ್ಲಿ ರಾಶಿ ಹಾಕಿರುವ ಕಸವನ್ನು ಮೂರು ಲಾರಿ, ಎರಡು ಜೆಸಿಬಿ ಯಂತ್ರ ಮತ್ತು ನಾಲ್ಕು ಟ್ರ್ಯಾಕ್ಟರ್‌ಗಳಲ್ಲಿ ಕಸ ಸಂಸ್ಕರ ಘಟಕಕ್ಕೆ ಸಾಗಣೆ ಮಾಡಲಾಗುತ್ತಿದೆ.

ನಗರದ ಪ್ರತಿ ಮನೆಗಳಲ್ಲಿ ಉತ್ಪತ್ತಿ ಆಗುವ ಹಸಿ ಕಸ, ಒಣ ಕಸ ಹಾಗೂ ಪ್ಲಾಸ್ಟಿಕ್‌ ಕಸವನ್ನು ಪ್ರತ್ಯೇಕವಾಗಿ ನೀಡುವುದು, ಕಸವನ್ನು ಮೂಲದಲ್ಲೇ ವಿಂಗಡಿಸಿ ಕೊಡುವುದರಿಂದ ಗೊಬ್ಬರ ತಯಾರಿಕೆ, ಪ್ಲಾಸ್ಟಿಕ್‌ ಮರುಬಳಕೆಗೆ ಸಹಕಾರಿಯಾಗಲಿದೆ.

ಕಸ ವಿಂಗಡಿಸದೆ ನೀಡಿದರೆ ಕಸ ಸಂಸ್ಕರಣ ಘಟಕದಲ್ಲಿ ತ್ಯಾಜ್ಯ ವಿಂಗಡಣೆಗೆ ಆಗುತ್ತಿಲ್ಲ. ಇದರಿಂದ ತ್ಯಾಜ್ಯದಿಂದ ಗೊಬ್ಬರ ತಯಾರಿಕೆಗೆ ಅಡ್ಡಿಯಾಗಿದೆ.

ಫಲ ನೀಡಿದ ಜಾಗೃತಿ: ಕಸ ವಿಂಗಡಿಸದೆ ವಿಲೇವಾರಿ ಮಾಡುವುದರಿಂದ ಆಗುವ ಸಮಸ್ಯೆ ಮತ್ತು ಆರೋಗ್ಯದ ಸಮಸ್ಯೆಗಳ ಕುರಿತು ನಗರಸಭೆ ಸೇರಿ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಿವೆ. ಕಸ ವಿಂಗಡಿಸಿ ನೀಡಲು ನಗರದಲ್ಲಿ ಪ್ರತಿ ಮನೆಗಳಿಗೂ ಹಸಿರು ಮತ್ತು ಕೆಂಪು ಬಣ್ಣದ ಎರಡು ಡಬ್ಬಗಳನ್ನು ಉಚಿತವಾಗಿ ನೀಡಲಾಗಿದೆ. ಆದರೂ ಜನ ಒಟ್ಟಿಗೆ ಕಸ ಹಾಕುವುದುನ್ನು ಬಿಟ್ಟಿಲ್ಲ.

ಶೇ 30ರಷ್ಟು ಜನರು ಮಾತ್ರ ಒಣ ಕಸ, ಹಸಿ ಕಸವನ್ನು ಪ್ರತ್ಯೇಕವಾಗಿ ನೀಡುತ್ತಾರೆ. ಉಳಿದವರು ಮನೆಯಲ್ಲಿ ಸಂಗ್ರಹ ಆಗುವ ಎಲ್ಲಾ ಕಸವನ್ನು ಒಂದೇ ಡಬ್ಬದಲ್ಲಿ ತುಂಬಿ ಕೊಡುತ್ತಾರೆ. ಇದನ್ನು ಸಂಗ್ರಹಿಸಲು ಸಾಧ್ಯವಾಗದೇ ಹಾಗೆಯೇ ಲಾರಿಗಳಲ್ಲಿ ತುಂಬಿ ಕಳುಹಿಸುವುದರಿಂದ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ ಎನ್ನುತ್ತಾರೆ ನಗರಸಭೆ ಪೌರಕಾರ್ಮಿಕರು.

‘ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ನೀಡುವ ಮನೆಗಳಿಂದ ಸಂಗ್ರಹವಾಗುವ ಕಸವನ್ನು ಪ್ರತ್ಯೇಕಿಸಿ ಸುಮಾರು 15 ಕೆ.ಜಿ. ತೂಕದ ಪೆಂಡಿಗಳನ್ನಾಗಿ ಮಾಡಿ ಮಾರಾಟ ಮಾಡುವ ಕೆಲಸವು ನಡೆಯುತ್ತಿದೆ.

ಇದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ ಮೂರು ಹಾಗೂ ವಡ್ಡರಪಾಳ್ಯ ಕಸ ವಿಲೇವಾರಿ ಘಟಕದಲ್ಲಿ ಒಂದು ಮರುಬಳಕೆ ಘನ ತ್ಯಾಜ್ಯ ವಿಂಗಡಣೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ’ ಎನ್ನುತ್ತಾರೆ ನಗರಸಭೆಯ ಪರಿಸರ ವಿಭಾಗದ ಎಂಜಿನಿಯರ್‌ ಈರಣ್ಣ.

ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕದಲ್ಲಿನ ಎರೆಹುಳು ಗೊಬ್ಬರ ತಯಾರಿಕ ಘಟಕ
ಅಂಕಿ ಅಂಶ 31 ನಗರಸಭೆ ವಾರ್ಡ್‌ಗಳ ಸಂಖ್ಯೆ 1.25 ಲಕ್ಷ ಜನಸಂಖ್ಯೆ 35–40 ಟನ್‌ ನಿತ್ಯ ಉತ್ಪಾದನೆ ಆಗುವ ಕಸ 205 ಪೌರಕಾರ್ಮಿಕರು
ಕಸದ ಸಮಸ್ಯೆಗೆ ಪರಿಹಾರ ಕಸವನ್ನು ರಸವನ್ನಾಗಿ ಪರಿವರ್ತಿಸಿ ಕೃಷಿ ಬಳಕೆಗೆ ಯೋಗ್ಯವಾಗುವಂತೆ ಮಾಡಲು ಮೂಲದಲ್ಲೇ ಕಸ ವಿಂಗಡಣೆ ಮಾಡಿ ಕೊಡುವುದೊಂದೇ ಈಗ ಸದ್ಯಕ್ಕೆ ನಮ್ಮ ಮುಂದೆ ಇರುವ ಏಕೈಕ ಮಾರ್ಗವಾಗಿದೆ
ದಿವಾಕರ್‌ ನಾಗ್‌ ಪರಿಸರವಾದಿ
ಬಳಕೆ ಆಗದ 35 ಟನ್‌ ಕಸ
ವಡ್ಡರಪಾಳ್ಯ ಗ್ರಾಮದಲ್ಲಿ ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕದಲ್ಲಿ ಪ್ರತಿ ನಿತ್ಯ 6 ಟನ್‌ ಗೊಬ್ಬರ ಮತ್ತು ಸುಮಾರು ಮುಕ್ಕಾಲು ಟನ್‌ ಎರೆ ಹುಳು ಗೊಬ್ಬರ ತಯಾರಿಸಲಾಗುತ್ತಿದೆ. ಆದರೆ ಇದಕ್ಕೆ ಬಳಕೆಯಾಗದೆ ನಿತ್ಯ 35 ಸಾವಿರ ಟನ್‌ ಕಸ ಉಳಿಯುತ್ತಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಇಲ್ಲಿಂದ ಹೊರಗೆ ಸಾಗಿಸಿ ಗೊಬ್ಬರವಾಗಿ ಪರಿವರ್ತಿಸಲು ಖಾಸಗಿ ಕಂಪನಿಯೊಂದಕ್ಕೆ ₹3 ಕೋಟಿಗಳಿಗೆ ಟಂಡರ್‌ ನೀಡಲಾಗಿದೆ. ಆದರೆ ಇಷ್ಟೊಂದು ಬೃಹತ್‌ ಪ್ಲಾಸ್ಟಿಕ್‌ ಯುಕ್ತ ಕಸದ ರಾಶಿಯನ್ನು ತೆರವು ಮಾಡುವುದು ಹೇಗೆ ಎನ್ನುವುದಕ್ಕೆ ಟೆಂಡರ್‌ ಪಡೆದವರಿಗು ಉತ್ತರ ದೊರೆಯದೆ ಇನ್ನೂ ಹಾಗೆಯೇ ರಾಶಿ ಉಳಿದಿದೆ ಎನ್ನುತ್ತಾರೆ ಪೌರಕಾರ್ಮಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.