ADVERTISEMENT

ಪಿತೃಪಕ್ಷಗಳ ಮಹತ್ವ ಯುವಜನರಿಗೆ ಅರಿವು ಮೂಡಿಸಿ 

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 13:02 IST
Last Updated 27 ಸೆಪ್ಟೆಂಬರ್ 2019, 13:02 IST
ವಿಜಯಪುರದಲ್ಲಿ ಪಿತೃಪಕ್ಷಗಳ ಅಂಗವಾಗಿ ಪೂಜೆ ಸಲ್ಲಿಸಲೆಂದು ಪಿತೃಗಳ ಸಮಾಧಿಗಳ ಬಳಿಯಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಜನರು 
ವಿಜಯಪುರದಲ್ಲಿ ಪಿತೃಪಕ್ಷಗಳ ಅಂಗವಾಗಿ ಪೂಜೆ ಸಲ್ಲಿಸಲೆಂದು ಪಿತೃಗಳ ಸಮಾಧಿಗಳ ಬಳಿಯಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಜನರು    

ವಿಜಯಪುರ: ಪಿತೃಪಕ್ಷದ ಅಮಾವಾಸ್ಯೆಯನ್ನು ಇತರ ಅಮಾವಾಸ್ಯೆಗಿಂತ ವಿಶೇಷವಾಗಿ ಆಚರಿಸಲಾಗುತ್ತದೆ. ಇದು ಸಂಪ್ರದಾಯವೂ ಆಗಿದ್ದು ನಮ್ಮಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಸಹಕಾರಿಯಾಗಲಿದೆ ಎಂದು ಹಿರಿಯ ವೆಂಕಟೇಶ್‌ರಾವ್ ಹೇಳಿದರು.

ಪಿತೃ ಪಕ್ಷದ ಆಚರಣೆಯ ಕುರಿತು ಮಾತನಾಡಿದ ಅವರು, ಪಿತೃ ಕಾರ್ಯಗಳು ಪಂಚ ಮಹಾಯಜ್ಞಗಳಲ್ಲಿ ಒಂದಾಗಿರುವುದರಿಂದ ಈ ಪಕ್ಷಕ್ಕೆ ಹೆಚ್ಚಿನ ಮಹತ್ವವಿದೆ. ಒಬ್ಬ ಮನುಷ್ಯ ಹುಟ್ಟಿದಾಗ ಆತನ ಪೋಷಣೆಯಲ್ಲಿ ತಂದೆ ತಾಯಿಯ ಪಾತ್ರ ಮಹತ್ವದಾಗಿರುತ್ತದೆ. ಆದ್ದರಿಂದಲೇ ಪಿತೃಪಕ್ಷಕ್ಕೆ ಎಲ್ಲಿಲ್ಲದ ಮಹತ್ವವಿದೆ. ಆದ್ದರಿಂದ ಪಿತೃ ಪಕ್ಷದ ಯಜ್ಞ ಆಚರಣೆಯಿಂದ ವಿಶೇಷ ಫಲ ದೊರೆಯುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಇದೆ ಎಂದರು.

ಪಿತೃಯಜ್ಞದ ವಿಶೇಷತೆ : ನಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿ ಬದುಕಿರುವಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಅವರ ಕಾಲಾನಂತರ ಶ್ರಾದ್ಧ, ತರ್ಪಣಗಳ ಮೂಲಕ ಸತ್ಕರಿಸುವುದನ್ನು ಪಿತೃಯಜ್ಞ ಎಂದು ಹೇಳುತ್ತೇವೆ. ಶ್ರಾದ್ಧ, ತರ್ಪಣಗಳಿಂದ ಪಿತೃಗಳನ್ನು ಆರಾಧಿಸಿದರೆ ಅವರ ಆರ್ಶೀವಾದದಿಂದ ಒಳ್ಳೆಯದು ಆಗುತ್ತದೆ. ಹಿಂದೂ ಧರ್ಮದಲ್ಲಿ ದೇವತಾರಾಧನೆಗೆ ಹೇಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆಯೋ ಅದೇ ರೀತಿ ಹಿರಿಯರಿಗೂ, ಪ್ರಕೃತಿಗೂ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದರು.

ADVERTISEMENT

ಹಿರಿಯರಾದ ಆದಿನಾರಾಯಣಸ್ವಾಮಿ ಮಾತನಾಡಿ, ‘ನಮ್ಮ ಜೀವನಕ್ಕೆ ಬೆಳಕನ್ನು ತೋಡಿ, ಆದರ್ಶ ಮಾರ್ಗದಲ್ಲಿ ನಡೆಯುವಂತೆ ಸಲಹೆ ನೀಡುವವರು ಹಿರಿಯರು. ಕುಟುಂಬದ ರಕ್ಷಣೆಗಾಗಿ ಹಾಗೂ ವ್ಯಕ್ತಿಯ ಅಭಿವೃದ್ಧಿಯ ಹಿಂದೆ ತಮ್ಮ ಶ್ರಮವನ್ನು ಧಾರೆಯೆರೆದು ಪೋಷಿಸುವವರು ಹಿರಿಯರು’ ಎಂದರು.

ಪಂಡಿತ ಮುನಿವೆಂಕಟಪ್ಪ ಮಾತನಾಡಿ, ‘ಶ್ರಾದ್ಧವನ್ನು ಮಾಡದಿದ್ದರೆ ಪಿತೃಗಳ ಆಸೆಗಳು ಅತೃಪ್ತವಾಗಿ ಉಳಿದು ಪಿತೃಗಳು ದುಷ್ಟಶಕ್ತಿಗಳ ಅಧೀನಕ್ಕೆ ಒಳಪಟ್ಟು ಅವರ ಗುಲಾಮರಾಗಿ, ಪಿತೃಗಳ ಮೂಲಕ ದುಷ್ಟಶಕ್ತಿಗಳು ಕುಟುಂಬದವರಿಗೆ ತೊಂದರೆ ಕೊಡುತ್ತಾರೆ ಎನ್ನಲಾಗುತ್ತದೆ. ಶ್ರಾದ್ಧವನ್ನು ಮಾಡುವುದರಿಂದ ಪಿತೃಗಳು ದುಷ್ಟಶಕ್ತಿಯ ಕೈಯಿಂದ ಮುಕ್ತರಾಗುವುದಲ್ಲದೇ, ಕುಟುಂಬದವರ ಜೀವನವೂ ಸಂತೋಷವಾಗಿರುತ್ತದೆ. ಈ ಬಗ್ಗೆ ಅನೇಕ ಪುರಾಣಗಳಲ್ಲಿ ಉಲ್ಲೇಖವಿದೆ’ ಎಂದರು.

ಪ್ರತಿ ತಿಂಗಳು ಶ್ರಾದ್ಧ ಮಾಡಲಾಗದಿದ್ದರೆ ದರ್ಶಶ್ರಾದ್ಧವನ್ನು ಚೈತ್ರ, ಭಾದ್ರಪದ ಮತ್ತು ಆಶ್ವಯುಜ ಮಾಸಗಳ ಅಮಾವಾಸ್ಯೆಯಂದು ಮಾಡಬಹುದು. ಇದೂ ಮಾಡಲಾಗದಿದ್ದರೆ ಭಾದ್ರಪದ ತಿಂಗಳಿನ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನಾದರೂ ಅವಶ್ಯವಾಗಿ ಮಾಡಲೇಬೇಕು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.