ADVERTISEMENT

ಬೇಸಿಗೆಗೂ ಮುನ್ನ ನೀರು, ಮೇವಿಗೆ ಪರದಾಟ

ಮೇವಿನ ಬ್ಯಾಂಕ್‌ ತೆರೆಯಲು ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:25 IST
Last Updated 25 ಜನವರಿ 2019, 13:25 IST
ವಿಜಯಪುರ ಹೋಬಳಿ ಭಟ್ರೇನಹಳ್ಳಿ ಬಳಿ ರೈತ ಚಿಕ್ಕವೆಂಕಟರಾಯಪ್ಪ ಅವರ ಕುಟುಂಬದವರು ಹೊಲದಲ್ಲಿ ಒಣಗಿದ ಎಲೆಗಳನ್ನು ಮೇವುಗಾಗಿ ಸಂಗ್ರಹಿಸುತ್ತಿರುವುದು 
ವಿಜಯಪುರ ಹೋಬಳಿ ಭಟ್ರೇನಹಳ್ಳಿ ಬಳಿ ರೈತ ಚಿಕ್ಕವೆಂಕಟರಾಯಪ್ಪ ಅವರ ಕುಟುಂಬದವರು ಹೊಲದಲ್ಲಿ ಒಣಗಿದ ಎಲೆಗಳನ್ನು ಮೇವುಗಾಗಿ ಸಂಗ್ರಹಿಸುತ್ತಿರುವುದು    

ವಿಜಯಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಬರಗಾಲದ ಛಾಯೆ ಎಲ್ಲೆಡೆ ಆವರಿಸಿಕೊಳ್ಳುತ್ತಿದೆ. ಕುಡಿಯುವ ನೀರು ಮತ್ತುದನ ಕರುಗಳ ಮೇವಿಗೆ ಜನರಲ್ಲಿ ಹಾಹಾಕಾರ ಶುರುವಾಗುತ್ತಿದೆ.

ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಕೊಳವೆಬಾವಿಗಳಲ್ಲಿನ ನೀರಿನ ಇಳುವರಿ ಕಡಿಮೆಯಾಗುತ್ತಿದೆ. ಸರ್ಕಾರ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಲು ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ, ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗದೆ, ಖಾಸಗಿ ರೈತರಿಂದ ಕೊಳವೆಬಾವಿ ಖರೀದಿಸಿ ನೀರು ಕೊಡುವ ಸ್ಥಿತಿಗೆ ಬಂದಿದ್ದಾರೆ.

ಸರ್ಕಾರ ದೇವನಹಳ್ಳಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಸಿದ್ದರೂ ಬರಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲ. ಇದರಿಂದಾಗಿ ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗಗಳಿಲ್ಲದೆ ನಗರ ಪ್ರದೇಶಗಳ ಕಡೆಗೆ ಗೂಳೆ ಹೊರಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ, ತೋಟಗಾರಿಕೆ ರೇಷ್ಮೆ ಸೇರಿದಂತೆ ವಿವಿಧ ಬಗೆಯ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕಾಗಿರುವ ಯುವಜನತೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದಲ್ಲಿ ತಿಂಗಳಿಗೆ ₹10 ರಿಂದ ₹12 ಸಾವಿರ ಸಂಬಳಕ್ಕಾಗಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ.

ಜಾನುವಾರುಗಳು ಹಸಿರು ಮೇವಿಲ್ಲದೆ ಬಡವಾಗುತ್ತಿವೆ. ಬೆರಳೆಣಿಕೆ ರೈತರು ಮಾತ್ರ ನೀರಾವರಿ ಜಮೀನುಗಳಲ್ಲಿ ಮೇವು ಬೆಳೆದುಕೊಳ್ಳುತ್ತಿದ್ದಾರೆ. ನೀರಿನ ಆಸರೆಯಿಲ್ಲದ ರೈತರು ಹೊಲಗಳಲ್ಲಿ ಕಟಾವಾಗಿ ಅಳಿದುಳಿದಿರುವ ಒಣಗಿದ ಎಲೆ, ರಾಗಿ ಗರಿಗಳನ್ನು ದನಕರುಗಳಿಗಾಗಿ ಶೇಖರಿಸುತ್ತಿದ್ದಾರೆ. ಇನ್ನೂ ಕೆಲವು ರೈತರು ಹಾಲಿನ ಬಿಲ್ಲಿನಲ್ಲಿ ಬರುವ ಹಣವನ್ನು ಮೇವು ಖರೀದಿಸಲು ಬಳಸುತ್ತಿದ್ದಾರೆಎಂದು ರೈತ ಆಂಜಿನಪ್ಪ ಹೇಳಿದರು.

ADVERTISEMENT

ನೀರಾವರಿ ಪ್ರದೇಶಗಳಲ್ಲಿ ಬೆಳೆದಿರುವ ಮುಸುಕಿನ ಜೋಳದಲ್ಲಿ ತೆನೆ ಕೀಳುವ ಮೊದಲೇ ಒಂದು ಸಾಲಿಗಿಷ್ಟು ಎಂದು ಮುಂಗಡ ಹಣವನ್ನು ಪಾವತಿಸಿ ತೆನೆಗಳು ಕಿತ್ತುಕೊಂಡ ಮೇಲೆ ಕಡ್ಡಿ ಕಟಾವು ಮಾಡಿ ರಾಸುಗಳಿಗೆ ಕೊಡುತ್ತಿದ್ದಾರೆ. ಇಂತಹ ತೀವ್ರತೆಯನ್ನು ಕಡಿಮೆ ಮಾಡುವುದರ ಜತೆಗೆ ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳ ರೈತರಿಗೆ ನೆರವಾಗುವುದಕ್ಕಾಗಿ ಸರ್ಕಾರ ಶೀಘ್ರವಾಗಿ ಮೇವಿನ ಬ್ಯಾಂಕುಗಳನ್ನು ತೆರೆದರೆ ಅನುಕೂಲವಾಗುತ್ತದೆ ಎಂದರು.

ತಹಶೀಲ್ದಾರ್ ರಾಜಣ್ಣ ಮಾತನಾಡಿ, ‘ಬರ ಪರಿಹಾರದಡಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೇವಿನ ಬ್ಯಾಂಕುಗಳನ್ನು ತೆರೆಯುವ ವಿಚಾರದಲ್ಲಿ ಇನ್ನೂ ಯಾವುದೇ ಆದೇಶ ಬಂದಿಲ್ಲ. ಸರ್ಕಾರದಿಂದ ಆದೇಶ ಬಂದ ಕೂಡಲೇ ಕ್ರಮ ವಹಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.