ವಿಜಯಪುರ(ದೇವನಹಳ್ಳಿ): ಹುಣಸೆ ಹಣ್ಣಿಗೆ ಬೆಲೆ ಕುಸಿದಿದ್ದು, ಖರೀದಿಸುವವರು ಇಲ್ಲದೆ ಮರದಲ್ಲೇ ಹುಣಸೆ ಹಣ್ಣು ಉಳಿದುಕೊಂಡಿದೆ.
ಎರಡು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಬೆಳೆ ಉತ್ತಮ ಇಳುವರಿ ಬಂದಿದೆ. ಆದರೂ ವ್ಯಾಪಾರಸ್ಥರು ಇದುವರೆಗೂ ತೋಟಗಳಿಗೆ ಬಂದು ಹುಣಸೆ ಖರೀದಿಗೆ ವ್ಯಾಪಾರ ನಡೆಸಿಲ್ಲ. ಇದರಿಂದ ಹಣ್ಣಾಗಿರುವ ಮರದಲ್ಲೇ ಉಳಿಯುವಂತಾಗಿದೆ.
ಉತ್ತಮ ಬೆಲೆಯಿದ್ದಾಗ ಪೈಪೋಟಿಗೆ ಬಿದ್ದವರಂತೆ ಬಂದು ಮರಗಳ ವ್ಯಾಪಾರ ನಡೆಸಿ, ಮುಂಗಡವಾಗಿ ಹಣ ನೀಡುತ್ತಿದ್ದರು. ಆದರೆ, ಈ ಬಾರಿ ಹುಣಸೆ ಹಣ್ಣಾಗಿ ಉದರುತ್ತಿದ್ದರೂ ಕೇಳುವವರು ಯಾರು ಇಲ್ಲದಂತಾಗಿದೆ.
ಪ್ರತಿವರ್ಷ ಖರೀದಿಸುತ್ತಿದ್ದ ವ್ಯಾಪಾರಸ್ಥರಿಗಳಿಗೆ ಕರೆ ಮಾಡಿದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ. ಮರ ಖರೀದಿಸಿ ಏನು ಮಾಡೋಣ ಎಂದು ಕೈ ಚೆಲ್ಲುತ್ತಿದ್ದಾರೆ ಎಂದು ರೈತ ಚಿನುವಂಡನಹಳ್ಳಿ ವೆಂಕಟಶಾಮಪ್ಪ ಬೇಸರ ವ್ಯಕ್ತಪಡಿಸಿದರು.
‘ಕಳೆದ ಎರಡು ವರ್ಷಗಳಿಂದ ಹುಣಸೆಹಣ್ಣಿನ ಬೆಲೆ ಏರಿಕೆಯಾಗುತ್ತಿಲ್ಲ. ನಾವು ರೈತರ ಬಳಿ ಮರದಲ್ಲಿ ಫಸಲು ನೋಡಿಕೊಂಡು ವ್ಯಾಪಾರ ಮಾಡಿಕೊಳ್ಳುತ್ತೇವೆ. ಒಂದೊಂದು ಮರವನ್ನು ₹2-3 ಸಾವಿರಕ್ಕೆ ಖರೀದಿ ಮಾಡಿಕೊಳ್ಳುತ್ತೇವೆ’.
ಕಡ್ಡಿಕಾಯಿ ಒಂದು ಕ್ವಿಂಟಾಲ್‌ಗೆ ₹4 ಸಾವಿರದಿಂದ ₹6 ಸಾವಿರ ಇರಬೇಕಿತ್ತು. ಈಗ ₹2,800 ಇದೆ. ಹೂವಣ್ಣಿಗೆ ₹8 ಸಾವಿರದಿಂದ ₹12 ಸಾವಿರದವರೆಗೂ ಬೆಲೆ ಇರಬೇಕಿತ್ತು. ಈಗ ₹6 ಸಾವಿರ ಇದೆ. ಹೊಸ ತಳಿಗೆ ಮಾತ್ರ ಕ್ವಿಂಟಾಲ್‌ಗೆ ₹10 ಸಾವಿರದವರೆಗೂ ಬೆಲೆ ಇದೆ. ಈ ತಳಿಗಳು ನಮ್ಮ ಭಾಗದಲ್ಲಿ ಇನ್ನೂ ಬೆಳೆದಿಲ್ಲ. ನಮ್ಮ ನಿರೀಕ್ಷೆಗೆ ತಕ್ಕಂತೆ ಹುಣಸೇ ಹಣ್ಣಿಗೆ ಬೆಲೆ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ಜನರೂ ಹುಣಸೇ ಹಣ್ಣು ಬಳಕೆ ಮಾಡಿ, ಟೊಮೆಟೊ ಹಾಗೂ ಸಾಸ್ ಹೆಚ್ಚಾಗಿ ಉಪಯೋಗ ಮಾಡುತ್ತಿರುವ ಕಾರಣ, ಬೇಡಿಕೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
‘ನಮ್ಮಲ್ಲಿ ಐದು ಮರಗಳಿವೆ. ಪ್ರತಿ ವರ್ಷ ಎಲ್ಲಾ ಮರಗಳನ್ನು ₹25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದೇವು. ಈ ವರ್ಷದಲ್ಲಿ ₹12 ಸಾವಿರಕ್ಕೆ ಕೇಳುತ್ತಿದ್ದಾರೆ. ಒಂದೊಂದು ಮರ ₹2400ಗೆ ಕೇಳುತ್ತಿದ್ದಾರೆ.ಜಯಕೃಷ್ಣಪ್ಪ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.