ADVERTISEMENT

ಕಸದ ರಾಶಿಗೆ ಸಿಗಲಿದೆಯೇ ಮುಕ್ತಿ!

ಕಸ ವಿಲೇವಾರಿಗೆ ಜಾಗದ ಕೊರತೆ: ಪುರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ

ವಡ್ಡನಹಳ್ಳಿ ಬೊಜ್ಯನಾಯ್ಕ
Published 30 ಜನವರಿ 2021, 2:22 IST
Last Updated 30 ಜನವರಿ 2021, 2:22 IST
ಬಿದ್ದಿರುವ ಕಸದ ರಾಶಿ
ಬಿದ್ದಿರುವ ಕಸದ ರಾಶಿ   

ದೇವನಹಳ್ಳಿ: ಪುರಸಭೆ ಅಸ್ತಿತ್ವಕ್ಕೆ ಬಂದು 50ವರ್ಷವಾದರೂ ಇದುವರೆಗೂ ತ್ಯಾಜ್ಯ ವಿಲೇವಾರಿ ಡಂಪಿಂಗ್ ಗೆ ಜಾಗ ಸಿಕ್ಕಿಲ್ಲ ಎಂಬುದು ಸ್ಥಳೀಯರ ಆರೋಪ
ವಾಗಿದೆ.

ಪ್ರಸ್ತುತ ಸಂಗ್ರಹವಾಗುವ ತ್ಯಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಐ.ಟಿ.ಐ ಕಾಲೇಜು ಮುಂಭಾಗವಿರುವ ಇರುವ ಒಂದು ಎಕರೆ ಎರಡು ಗುಂಟೆ ಜಾಗದಲ್ಲೇ ಬೆಟ್ಟದಂತೆ ಕಸ ಪ್ರತಿನಿತ್ಯ ಬೀಳುತ್ತಿದೆ. ಇದು ಅನಾರೋಗ್ಯಕ್ಜೆ ಕಾರಣವಾಗುತ್ತಿದೆ.

ಕೇವಲ 150 ಮೀಟರ್ ನಲ್ಲಿ ತಾಲ್ಲೂಕು ಸಮುದಾಯದ ಆರೋಗ್ಯ ಕೇಂದ್ರ, ಕೋವಿಡ್ ವ್ಯಾಕ್ಸಿನ್ ಘಟಕಗಳಿದ್ದುಹಿಂಗಾರು ಆರಂಭವಾಗಿರುವುದರಿಂದ ಪೂರ್ವದಿಂದ ದುರ್ವಾಸನೆ ಹೊತ್ತಗಾಳಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪ್ರತಿನಿತ್ಯ ಆಸ್ಪತ್ರೆಗೆ ಬರುವ ಅನಾರೋಗ್ಯವಂತರ ಮೇಲೆ ದುಷ್ಪ‍ರಿಣಾಮ ಬೀರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿದ್ದ ಪುರಸಭೆ ಜಾಗ, ರಾಜಕಾಲುವೆ ಮತ್ತು ಪೋಷಕ ಕಾಲುವೆಗಳು ಒತ್ತುವರಿಯಾಗಿವೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಪ್ರಭಾವಿಗಳು ಮಾರಾಟ ಮಾಡಿದ್ದಾರೆ. ಕೆಲ ಪ್ರಭಾವಿಗಳು ರಾಜಕಾಲುವೆಗಳ ಮೇಲೆಯೇ ಐಷರಾಮಿ ಬಂಗಲೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಒಂದೊಂದು ಇಂಚು ಜಾಗ ಸಹ ಕಬಳಿಸಲಾಗಿದೆ. ಇನ್ನು ಕಸ ವಿಲೇವಾರಿ ಮಾಡಿ ಡಂಪಿಂಗ್ ಮಾಡಲು ಪುರಸಭೆ ವ್ಯಾಪ್ತಿಯಲ್ಲಿ ಜಾಗವಿಲ್ಲ. ಪುರಸಭೆ ವ್ಯಾಪ್ತಿಯಿಂದ ಹೊರಗೆ ಎರಡು ಮೂರು ಕಿ.ಮೀನಲ್ಲಿ ಸರ್ಕಾರದ ಜಾಗ ಖರೀದಿಸಿ ಕಸ ವಿಲೇವಾರಿ ಮಾಡಲು ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರು ನಿಲಕ್ಷ್ಯ ವಹಿಸಿದ್ದಾರೆ ಎಂಬುದು ನಾಗರಿಕರ ಆರೋಪ.

2006ರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದ ನಂತರ ದೇವನಹಳ್ಳಿ ತಾಲ್ಲೂಕಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ.

ವಿಮಾನ ನಿಲ್ದಾಣಕ್ಕೆ ಮೊದಲು ಕಡಿಮೆ ಬೆಲೆಯಲ್ಲಿ ಜಾಗ ಸಿಗುತ್ತಿತ್ತು. ಅಂತಹ ಸಂದರ್ಭದಲ್ಲಿ ಕಂದಾಯ ಇಲಾಖೆ ವ್ಯಾಪ್ತಿ ಸರ್ಕಾರಿ ಜಾಗ ಗುರುತಿಸಿ ಪುರಸಭೆಗೆ ಹಸ್ತಾಂತರ ಮಾಡಲು ಆಯ್ಕೆಗೊಂಡ ಜನಪ್ರತಿನಿಧಿಗಳು ಆಸಕ್ತಿ ವಹಿಸಲೇ ಇಲ್ಲ. ಇದರ ಪರಿಣಾಮ ನಗರ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ. ಈಗಲಾದರೂ ಎಚ್ಚೆತ್ತುಗೊಳ್ಳದಿದ್ದರೆ ದೇವನಹಳ್ಳಿ ಎರಡನೇ ಮಂಡೂರು ಆಗಲಿದೆ ಎನ್ನುತ್ತಾರೆ ಪುಟ್ಟಪ್ಪನಗುಡಿ ಬೀದಿ ನಿವಾಸಿ ಎಂ.ಆಂಜಿನಪ್ಪ.

ಐ.ಟಿ.ಐ ಕಾಲೇಜು ಮುಂಭಾಗ ಡಂಪಿಂಗ್ ಮಾಡುತ್ತಿರುವ ಕಸದ ರಾಶಿ ಸಮೀಪ ನಾಯಿಗಳ ಉಪಟಳ ಹೇಳತೀರಾಗಿದೆ. ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಆಗಿರುವುದರಿಂದ ವಾಹನ ಸಂಚಾರದ ದಟ್ಟಣೆ ಇರುತ್ತದೆ. ಪಾದಾಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಮೇಲೆ ನಾಯಿಗಳು ಮುಗಿಬೀಳುತ್ತವೆ. ಸೈಕಲ್ ಗಳಲ್ಲಿ ಬರುವ ಶಾಲಾ –ಕಾಲೇಜು ವಿದ್ಯಾರ್ಥಿಗಳನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ ಎನ್ನುತ್ತಾರೆ ಅಂತಿಮ ವರ್ಷದ ಬಿ.ಎ.ವಿದ್ಯಾರ್ಥಿ ರಾಕೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.