ADVERTISEMENT

‘ರಂಗಭೂಮಿ ಅದ್ಭುತ ಪ್ರತಿಭೆ ಮಾಸ್ಟರ್ ಹಿರಣ್ಣಯ್ಯ’

​ಪ್ರಜಾವಾಣಿ ವಾರ್ತೆ
Published 2 ಮೇ 2019, 13:56 IST
Last Updated 2 ಮೇ 2019, 13:56 IST
ವಿಜಯಪುರ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಏರ್ಪಡಿಸಿದ್ದ ನುಡಿನಮನದಲ್ಲಿ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿದರು
ವಿಜಯಪುರ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಏರ್ಪಡಿಸಿದ್ದ ನುಡಿನಮನದಲ್ಲಿ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿದರು   

ವಿಜಯಪುರ: ರಂಗಭೂಮಿ ಅದ್ಭುತ ಪ್ರತಿಭೆ ಮಾಸ್ಟರ್ ಹಿರಣ್ಣಯ್ಯ ಅವರ ನೇರ ನುಡಿ, ರಾಜಕೀಯದ ಬಗ್ಗೆ ಕಟುವಾದ ಟೀಕೆ, ನಿರ್ಭೀತವಾದ ಮಾತುಗಳನ್ನು ಜನರು ಬಹಳ ಆಸಕ್ತಿಯಿಂದ ಆಲಿಸುತ್ತಿದ್ದರು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಅಭಿಪ್ರಾಯಪಟ್ಟರು.

ಇಲ್ಲಿನ ಗಾಂಧಿಚೌಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಆಯೋಜಿಸಿದ್ದ ಮಾಸ್ಟರ್ ಹಿರಣ್ಣಯ್ಯ ನುಡಿನಮನದಲ್ಲಿ ಅವರು ಮಾತನಾಡಿದರು.

ಹಿರಣ್ಣಯ್ಯ ಎಂದಿಗೂ ಪ್ರಶಸ್ತಿಗಳಿಗೆ ಆಸೆಪಟ್ಟವರಲ್ಲ. ಅದಕ್ಕಾಗಿ ರಾಜಕಾರಣಿಗಳ ಕೈಕಾಲು ಹಿಡಿದು ಕೇಳಿಕೊಂಡವರೂ ಅಲ್ಲ. ಇದೇ ಕಾರಣದಿಂದಲೇ ನಾಡಿನ ಎಲ್ಲಾ ಕಡೆ ತಮ್ಮ ನೇರ ನುಡಿಗಳಿಂದ ಮುಕ್ತವಾಗಿ ಮಾತನಾಡುತ್ತಿದ್ದರು. ಹಿರಣ್ಣಯ್ಯ ತಮ್ಮ ನಾಟಕಗಳ ಮೂಲಕ ಸಮಾಜದ ಓರೆಕೋರೆ ತಿದ್ದುವುದಕ್ಕೆ ಆದ್ಯತೆ ನೀಡುತ್ತಿದ್ದರು. ಸಮಾಜದಲ್ಲಿನ ಸಮಸ್ಯೆಗಳೇ ಅವರ ನಾಟಕಗಳ ವಸ್ತುಗಳಾಗಿರುತ್ತಿದ್ದವು. ಅವರ ನಾಟಕಗಳು ವಿದೇಶಗಳಲ್ಲೂ ಹೆಚ್ಚು ಜನಪ್ರಿಯವಾಗಿವೆ. ಇಂತಹ ರಂಗಕರ್ಮಿಯನ್ನು ಎಲ್ಲರೂ ಆದರ್ಶವಾಗಿ ಸ್ವೀಕರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಕಲಾವಿದರಲ್ಲಿ ಪ್ರಾಮಾಣಿಕತೆ, ಬದ್ಧತೆ ಇದ್ದರೆ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಬಹುದು ಎನ್ನುವುದಕ್ಕೆ ಮಾಸ್ಟರ್ ಹಿರಣ್ಣಯ್ಯ ಮಾದರಿಯಾಗಿದ್ದಾರೆ. ಅವರಿಗೆ ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಆಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿಗಳು ಸಿಕ್ಕಿವೆ. ವಿಡಂಬನಾತ್ಮಕ ನಾಟಕ, ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ಲಂಚಾವತಾರ, ನಡುಬೀದಿ ನಾರಾಯಣ, ಎತ್ತಂಗಡಿ ವೆಂಕಟಪ್ಪ ಧಾರಾವಾಹಿಗಳು ಜನರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೇ ಉಳಿದಿವೆ. ಮಕ್ಮಲ್ ಟೋಪಿ, ಕಪಿಮುಷ್ಠಿ, ದೇವದಾಸಿ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮನಾಯಕ ನಾಟಕಗಳಿಂದ ಅವರು ಹೆಚ್ಚು ಪ್ರಸಿದ್ಧರಾಗಿದ್ದಾರೆ ಎಂದರು.

ಮಾಸ್ಟರ್ ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮುಖಂಡರಾದ ಎಂ.ವಿ.ನಾಯ್ಡು, ಕೃಷ್ಣಪ್ಪ, ರಾಮಕೃಷ್ಣಪ್ಪ, ವಿಶ್ವನಾಥ್, ಕೆಂಚೇಗೌಡ, ನಾರಾಯಣಸ್ವಾಮಿ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.