ADVERTISEMENT

ಹೊಸಕೋಟೆ: 11 ಹಾಸ್ಟೆಲ್‌ಗಳಿಗೆ ನಾಲ್ವರು ವಾರ್ಡನ್‌

ಎಂಟು ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಇಲ್ಲ ನಿಲಯ ಪಾಲಕರು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 4:54 IST
Last Updated 5 ಮಾರ್ಚ್ 2024, 4:54 IST
ಹೊಸಕೋಟೆ ನಗರದಲ್ಲಿ ನಡೆಯುತ್ತಿದ್ದ ಬಿಸಿಎಂ ಹಾಸ್ಟೆಲ್
ಹೊಸಕೋಟೆ ನಗರದಲ್ಲಿ ನಡೆಯುತ್ತಿದ್ದ ಬಿಸಿಎಂ ಹಾಸ್ಟೆಲ್   

ಹೊಸಕೋಟೆ: ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 11 ವಿದ್ಯಾರ್ಥಿ ನಿಲಯಗಳಲ್ಲಿ ಏಳರಲ್ಲಿ ನಿಲಯ ಪಾಲಕರು ಇಲ್ಲ. 11 ಹಾಸ್ಟೆಲ್‌ಗಳ 590 ವಿದ್ಯಾರ್ಥಿಗಳನ್ನು ನಾಲ್ಕೇ ನಿಲಯಪಾಲಕರು ನೋಡಿಕೊಳ್ಳಬೇಕಿದೆ.

11 ವಿದ್ಯಾರ್ಥಿ ನಿಯಲಗಳಲ್ಲಿ ಮೂರು ನಿಲಯಪಾಲಕರು ಇದ್ದಾರೆ. ಒಂದರಲ್ಲಿ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಈ ನಾಲ್ವರು 11 ವಿದ್ಯಾರ್ಥಿ ನಿಲಯ‌ಗಳನ್ನು‌ ನಿರ್ವಹಣೆ ಮಾಡಬೇಕಿದೆ.

10 ಹಾಸ್ಟೆಲ್‌ಗಳನ್ನು ಕೇವಲ ಮೂವರು ಮಾತ್ರ ನೋಡಿಕೊಳ್ಳಬೇಕಿರುವುದರಿಂದ ಅವುಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಮೂವರಲ್ಲಿ ಒಬ್ಬರಿಗೆ ಐದು ಹಾಸ್ಟೆಲ್‌, ಮತ್ತೊಬ್ಬರಿಗೆ ಮೂರು ಹಾಸ್ಟೆಲ್‌, ಮತ್ತೊಬ್ಬರಿಗೆ ಎರಡು ಹಾಸ್ಟೆಲ್‌ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಐದು ಹಾಸ್ಟೆಲ್‌ಗಳನ್ನು ನೋಡಿಕೊಳ್ಳುವ ವಾರ್ಡನ್ ಪಾಡಂತೂ ಹೇಳತೀರದಾಗಿದೆ. ಕನಿಷ್ಠ ಒಂದು ದಿನವೂ ಹಾಸ್ಟೆಲ್‌ನಲ್ಲಿದ್ದು ಮಕ್ಕಳ ಸಮಸ್ಯೆ ಆಲಿಸಲು ಸಾಧ್ಯವಾಗದಷ್ಟು ಒತ್ತಡ ಅವರ ಮೇಲಿದೆ.

ADVERTISEMENT

ನಿಲಯ ಪಾಲಕರು ಕೇವಲ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಊಟ ಮತ್ತು ವಸತಿ ವ್ಯವಸ್ಥೆ ಮಾಡುವುದು ಮಾತ್ರವಲ್ಲ. ಮಕ್ಕಳಿಗೆ ಪೋಷಕರಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ನೋಡಿಕೊಳ್ಳಬೇಕಿದೆ. ವಾರ್ಡನ್‌ಗಳ ಕೊರತೆ ಇರುವುದರಿಂದ ಜವಾಬ್ದಾರಿ ವಹಿಸಿಕೊಂಡಿರುವ ಹಾಸ್ಟೆಲ್‌ಗಳಿಗೆ ಸುತ್ತಾಡುತ್ತಲೇ ಇರುತ್ತಾರೆ. ಪೋಷಕರ ರೀತಿಯಲ್ಲಿ ನೋಡಿಕೊಳ್ಳಬೇಕಾದ ನಿಲಯಪಾಲಕರು ನಮಗೆ ದಿನ ಪೂರ್ತಿ ಸಿಗುವಂತಾಗಲಿ ಎಂದು ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬ ತಿಳಿಸುತ್ತಾರೆ.

ತಾಲ್ಲೂಕಿನ ಹಾಸ್ಟೆಲ್‌ಗಳಲ್ಲಿ ದಾಖಲಾಗಲು ಒಟ್ಟು 735 ಮಕ್ಕಳಿಗೆ ಮಂಜೂರಾತಿ ನೀಡಲಾಗಿತ್ತು. ಅದರಲ್ಲಿ 2023-24ನೇ ಸಾಲಿನಲ್ಲಿ ದಾಖಲಾಗಿರುವುದು 590 ವಿದ್ಯಾರ್ಥಿಗಳು ಮಾತ್ರ. ಅದರಲ್ಲಿ 145 ದಾಖಲಾತಿ ಕೊರತೆ ಆಗಿದ್ದು, ಅಷ್ಟೂ ಸ್ಥಾನಗಳು ಖಾಲಿ ಇವೆ. ಇದಕ್ಕೆ ತಾಲ್ಲೂಕಿನ ಹಾಸ್ಟೆಲ್‌ಗಳಲ್ಲಿ ನಿಲಯ ಪಾಲಕರ ಕೊರತೆ ಕಾರಣ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಾದರೂ ವಾರ್ಡನ್‌ಗಳ ಕೊರತೆ ನೀಗಿಸಿ ವಿದ್ಯಾರ್ಥಿಗಳು ಹಾಸ್ಟೆಲ್‌ಗಳತ್ತ ಮುಖ ಮಾಡುವಂತೆ ಮಾಡುವ ಜವಾಬ್ದಾರಿಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕಿದೆ.

ವಿದ್ಯಾರ್ಥಿನಿಲಯದ ವಿವರ:

ತಾಲ್ಲೂಕಿನ ಬೆಂಡಿಗಾನಹಳ್ಳಿ, ದೇವಲಾಪುರ, ಹೊಸಕೋಟೆ ನಗರ (ಬಾಲಕ ಮತ್ತು ಬಾಲಕಿಯರ), ಕೊರಟಿ, ನಂದಗುಡಿ, ತಾವರೆಕೆರೆಗಳಲ್ಲಿ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹೊಸಕೋಟೆ ನಗರದಲ್ಲಿ ಬಾಲಕ ಮತ್ತು ಬಾಲಕಿಯರ ಮತ್ತು ಸೂಲಿಬೆಲೆಯಲ್ಲಿ ಒಂದು ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿವೆ.

ತಾಲ್ಲೂಕಿನ 11 ಹಾಸ್ಟೆಲ್‌ಗಳಲ್ಲಿ ಪೂರ್ಣ ಪ್ರಮಾಣದ ವಾರ್ಡನ್‌ಗಳು ಇಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ನಿಲಯ ಪಾಲಕರನ್ನು ನಿಯೋಜಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ
ಪ್ರೀತಿ ಸಹಾಯಕ ನಿರ್ದೇಶಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.