ADVERTISEMENT

ಹೊಸಕೋಟೆ: ಮಾರುಕಟ್ಟೆ ಇಲ್ಲದೆ ಬಾಡಿದ ಹೂ ಬೆಳೆಗಾರರು

ಎನ್.ಡಿ.ವೆಂಕಟೇಶ್‌
Published 18 ಡಿಸೆಂಬರ್ 2023, 7:56 IST
Last Updated 18 ಡಿಸೆಂಬರ್ 2023, 7:56 IST
ಹೊಸಕೋಟೆ ನಗರದಲ್ಲಿ ಇರುವ ಖಾಸಗಿ ಹೂವಿನ ಮಾರುಕಟ್ಟೆಯಲ್ಲಿ ಹೂ ಮಾರಲು ನಿಂತಿರುವ ರೈತರು
ಹೊಸಕೋಟೆ ನಗರದಲ್ಲಿ ಇರುವ ಖಾಸಗಿ ಹೂವಿನ ಮಾರುಕಟ್ಟೆಯಲ್ಲಿ ಹೂ ಮಾರಲು ನಿಂತಿರುವ ರೈತರು   

ಹೊಸಕೋಟೆ: ತಾಲ್ಲೂಕಿನಾದ್ಯಂತ ಸುಮಾರು 2,300 ಹೆಕ್ಟೇರ್‌ನಲ್ಲಿ ರೈತರು ಪುಷ್ಪಕೃಷಿ ಮಾಡುತ್ತಿದ್ದಾರೆ. ಆದರೆ ಈ ಹೂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಂಗಳೂರಿನ ವಿವಿಧ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಬೇಕಾದ ಸ್ಥಿತಿ ಇದೆ.

ತಾಲ್ಲೂಕಿನ ಮಾಲೂರು ರಸ್ತೆಯಲ್ಲಿರುವ ಗೊಣಕನಹಳ್ಳಿ ಬಳಿಯಲ್ಲಿ ನಿರ್ಮಾಣ ಆಗುತ್ತಿರುವ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಹೂವಿನ ಮಾರುಕಟ್ಟೆ ನಿರ್ಮಿಸಿರುವ ಕುರಿತು ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದರು. ಆದರೆ ಎಪಿಎಂಸಿ ನಗರದಿಂದ ಸುಮಾರು 9 ಕಿ.ಮೀ. ದೂರವಿದ್ದು, ಇಲ್ಲಿ ಹೂ ಮಾರಾಟಕ್ಕೆ ಹೂ ಬೆಳೆಗಾರರ ವಿರುದ್ಧವಿದೆ.

ಹೀಗಾಗಿ ಹೊಸಕೋಟೆ ಸಮೀಪವೇ ಯಾವುದಾದರೂ ಸರ್ಕಾರಿ ಜಾಗ ಗುರುತಿಸಿ ಹೂವಿನ ಮಾರುಕಟ್ಟೆ ನಿರ್ಮಿಸಬೇಕೆಂಬುದು ಹೂ ಬೆಳೆಗಾರರ ಮನವಿ.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 2,300 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಯುತ್ತಿದ್ದು, ಅದರಲ್ಲಿ 1,200 ಹೆಕ್ಟೇರ್‌ನಲ್ಲಿ ಗುಲಾಬಿ, 600 ಹೆಕ್ಟೇರ್‌ನಲ್ಲಿ ಸೇವಂತಿಗೆ, 150 ಹೆಕ್ಟೇರ್‌ನಲ್ಲಿ ಚಂಡುಹೂ ಉಳಿದಂತೆ ಸುಗಂಧ ರಾಜ, ಮಲ್ಲಿಗೆ, ಕನಕಾಂಬರ, ಕಾಕಡ ಸೇರಿದಂತೆ ಹಲವು ಬಗೆಯ ಹೂಗಳನ್ನು ಬೆಳೆಯಲಾಗುತ್ತಿದೆ.

ಸದ್ಯಕ್ಕೆ ನಗರದಲ್ಲಿ ಖಾಸಗಿ ಹೂವಿನ ಮಾರುಕಟ್ಟೆ ಇದ್ದು, ಅಲ್ಲಿಗೆ ಬರುವ ರೈತರಿಗೆ ಸೂಕ್ತ ಮೂಲ ಸೌಕರ್ಯ ಇಲ್ಲದೆ ಪರದಾಡುವಂತಾಗಿದೆ. ದೊಡ್ಡ ಮಟ್ಟದಲ್ಲಿ ಹೂ ಬೆಳೆಯುವ ತಾಲ್ಲೂಕಿನಲ್ಲಿ ಸರಿಯಾದ ಮಾರುಕಟ್ಟೆ ಇಲ್ಲದೆ ಬೇರೆ ಊರಿನ ಮಾರುಕಟ್ಟೆಗಳಿಗೆ ಬೆಳೆಗಾರರು ಎಡತಾಕುವಂತಾಗಿದೆ. ಅಲ್ಲದೆ ಬೆಳೆಗಾರರಿಗೆ ಸಾಗಣೆ ವೆಚ್ಚ ಹೊರೆ ಆಗುತ್ತಿದೆ. ಉತ್ತಮ ಬೆಲೆ ಸಿಗುತ್ತದೆ ಎಂದು ದೂರದ ಊರಿಗೆ ಅಲೆಯಲು ಸಾಧ್ಯವಿಲ್ಲ ಎಂದು ಸಣ್ಣ ರೈತರು, ಸ್ಥಳೀಯ ಮಾರುಕಟ್ಟೆಯಲ್ಲೆ ಸಿಗುವ ಬೆಲೆಗೆ ಹೂ ಮಾರಾಟ ಮಾಡಿ ಹೋಗುತ್ತಾರೆ. ಹೀಗಾಗಿ ಸ್ಥಳೀಯವಾಗಿಯೇ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿಕೊಡಬೇಕೆಂಬುದು ಬೆಳೆಗಾರರ ಒತ್ತಾಯ.

ಈಗಿರುವ ಮಾರುಕಟ್ಟೆಯಲ್ಲಿ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ, ಸ್ವಚ್ಚತೆ ಇಲ್ಲ, ಮಳೆ ಬಂದರೆ ಇಡೀ ಮಾರುಕಟ್ಟೆ ಕೆಸರುಮಯವಾಗುತ್ತದೆ. ನೀರಿನ ಸೌಲಭ್ಯ, ಶೌಚಾಲಯ ಸೌಲಭ್ಯ ಹೀಗೆ ಹಲವು ಸೌಲಭ್ಯಗಳು ಇಲ್ಲದೆ ರೈತರಿಗೆ ಪರದಾಡುವಂತಾಗಿದೆ. ಖಾಸಗಿ ಹೂವಿನ ಮಾರುಕಟ್ಟೆಯಾಗಿರುವುದರಿಂದ ಸಮಸ್ಯೆ ಬಗ್ಗೆ ಯಾರನ್ನು ಕೇಳಬೇಕು ಎಂಬ ಗೊಂದಲದಲ್ಲಿಯೇ ರೈತರು ಕಾಲ ದೂಡುತ್ತಿದ್ದಾರೆ.

ಸರ್ಕಾರಿ ಮಾರಕಟ್ಟೆಯಾಗಿದ್ದರೆ, ಅದಕೊಂದು ಸಮಿತಿ, ಅಧಿಕಾರಿಗಳು ಇರುತ್ತಾರೆ. ಆದರೆ ಇದು ಖಾಸಗಿ ಮಾರುಕಟ್ಟೆಯಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಯಾರನ್ನು ಕೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಆದರೆ ಏಜೆಂಟ್‌ಗಳು ಶುಂಕ ವಸೂಲಿ ಮಾಡುತ್ತಿದ್ದಾರೆ. ಆದರೆ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ ಎನ್ನುತ್ತಾರೆ ಹೂ ಬೆಳೆಗಾರ ಶ್ರೀನಿವಾಸ್.

ಖಾಸಗಿ ಮಾರುಕಟ್ಟೆಯಲ್ಲಿ ಅಶುಚಿತ್ವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.