ವಿಜಯಪುರ(ದೇವನಹಳ್ಳಿ): ಪಟ್ಟಣದ ಪ್ರಮುಖ ರಸ್ತೆಗೆ ಅಡ್ಡವಾಗಿ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ನಿಲ್ಲಿಸುತ್ತಿರುವುದರಿಂದ ವಾಹನ ಸವಾರರಿಗೆ ಅಡಚಣೆಯಾಗುತ್ತಿರುವುದರ ಜತೆಗೆ ಇಲ್ಲಿನ ವ್ಯಾಪಾರಿಗಳಿಗೂ ತೊಂದರೆಯಾಗುತ್ತಿದೆ.
ಹಳೆ ಕೆನರಾ ಬ್ಯಾಂಕ್ ರಸ್ತೆ, ವೆಂಕಟರಮಣ ದೇವಾಲಯದ ರಸ್ತೆ, ನಾಡಕಚೇರಿ ರಸ್ತೆಗಳಲ್ಲಿ ವಾಹನಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಸಹಾ ರಸ್ತೆಯನ್ನು ಅಕ್ರಮಿಸಿ ವ್ಯಾಪಾರ ವಹಿವಾಟು ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಬಂದು ವ್ಯಾಪಾರ ಮಾಡುವ ಗ್ರಾಹಕರು ರಸ್ತೆಯಲ್ಲೆ ನಿಂತು ವ್ಯಾಪಾರ ಮಾಡುತ್ತಾರೆ. ಇದರಿಂದ ರಸ್ತೆಯಲ್ಲಿ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತಿದೆ.
ಬೆಂಗಳೂರು ಹಾಗೂ ವಿಮಾನ ನಿಲ್ದಾಣಕ್ಕೆ ಕೆಲಸಕ್ಕೆ ಹೋಗುವವರು ಅಂಗಡಿ ಮಳಿಗೆ ಮುಂಭಾಗದಲ್ಲಿ ದ್ವಿವಾಹನಗಳನ್ನು ಸರೋವರದ ಮುಂಭಾಗದ ರಸ್ತೆಯುದ್ದಕ್ಕೂ ನಿಲ್ಲಿಸಿ ಹೋಗುತ್ತಾರೆ.
‘ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯುವಷ್ಟರಲ್ಲಿ 10 ದ್ವಿಚಕ್ರ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿ ಹೋಗಿರುತ್ತಾರೆ. ನಾವು ವ್ಯಾಪಾರ ಮಾಡುವುದು ಹೇಗೆ? ಅಂಗಡಿಗಳ ಬಾಡಿಗೆ ಕಟ್ಟುವುದು ಹೇಗೆ? ಪುರಸಭೆಯವರು ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಅಶೋಕ್.
ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಲು ಸಹಕರಿಸುವಂತೆ ಪೊಲೀಸರಿಗೆ ಪತ್ರ ಬರೆದಿದ್ದೇವೆ. ಸಾರ್ವಜನಿಕವಾಗಿ ಒಂದು ಬಾರಿಗೆ ಎಚ್ಚರಿಕೆ ಕೊಟ್ಟು ನಂತರ ರಸ್ತೆಗೆ ಅಡ್ಡಲಾಗಿ ನಿಲ್ಲಿಸುವ ವಾಹನಗಳ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಪುರಸಭೆ ವಿಜಯಪುರ ಮುಖ್ಯಾಧಿಕಾರಿ ಸಂತೋಷ್.ಬಿ.ಆರ್. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.