ಸೂಲಿಬೆಲೆ: ಹೋಬಳಿಯ ಯನಗುಂಟೆ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನಕ್ಕಾಗಿ ಸರ್ಕಾರಿ ಗೋಮಾಳದಲ್ಲಿ 3.20 ಎಕರೆ ಜಮೀನಿನ ಗಡಿ ಗುರುತಿಸಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.
‘ಹಿಂದೆ ಗ್ರಾಮಸ್ಥರ ಪ್ರತಿಯೊಂದು ಕುಟುಂಬದಲ್ಲಿ ಸ್ವಂತ ಜಮೀನುಗಳು ಇದ್ದವು. ಗ್ರಾಮದಲ್ಲಿ ಯಾವುದೇ ಜನಾಂಗದವರು ಸಾವನ್ನಪ್ಪಿದರೆ ಅವರ ಸ್ವಂತ ಜಮೀನುಗಳಲ್ಲಿ ಸಂಸ್ಕಾರ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಕೆಲವು ಕುಟುಂಬಗಳು ಜಮೀನುಗಳನ್ನು ಮಾರಾಟ ಮಾಡಿರುವುದು ಹಾಗೂ ಇನ್ನಿತರ ಕಾರಣಗಳಿಂದಾಗಿ ಜಮೀನು ಕಳೆದುಕೊಂಡರು. ಆಗ ಸಾರ್ವಜನಿಕ ಸ್ಮಶಾನದ ಅವಶ್ಯಕತೆ ಸೃಷ್ಟಿಯಾಯಿತು’ ಎನ್ನುತ್ತಾರೆ ಗ್ರಾಮಸ್ಥರು.
ಅರಣ್ಯ ಇಲಾಖೆ, ಪೊಲೀಸ್, ತಾಲ್ಲೂಕು ಸರ್ವೆ ಅಧಿಕಾರಿಗಳೊಂದಿಗೆ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ಕಾರಿ ಗೋಮಾಳದ ಸ್ಥಳವನ್ನು ಅಳತೆ ಮಾಡಿ ಸ್ಮಶಾನ ಭೂಮಿಯನ್ನು ಗುರುತಿಸಿ ಕೊಟ್ಟರು ಎಂದು ಸ್ಥಳೀಯರು ತಿಳಿಸಿದರು.
ಯನಗುಂಟೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಸ್ಮಶಾನ ಇರಲಿಲ್ಲ. ಸುಮಾರು 30-40 ವರ್ಷಗಳಿಂದ ಇದ್ದಂತಹ ಸಮಸ್ಯೆ ಈ ದಿನ ಇತ್ಯರ್ಥವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ತಿಳಿಸಿದರು.
ಕಂದಾಯ ಇಲಾಖೆಯಿಂದ ಯನಗುಂಟೆ ಸ್ಮಶಾನಕ್ಕೆ 2003-04ರಲ್ಲಿ ಜಮೀನು ಮಂಜೂರಾಗಿದೆ. ಸರ್ಕಾರಿ ಗೋಮಾಳದಲ್ಲಿ 3 ಎಕರೆ 20 ಗುಂಟೆ ಭೂಮಿಯನ್ನು ಗುರುತಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಸೂಲಿಬೆಲೆ ರಾಜಸ್ವ ನಿರೀಕ್ಷಕ ನ್ಯಾನಮೂರ್ತಿ ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿ ರಫೀಖ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಮೇಶ್ ಗುಗ್ಗುರಿ, ತಾಲ್ಲೂಕು ಸರ್ವೆಯರ್ ರಾಮಪ್ರಸಾದ್, ಅರಣ್ಯ ಇಲಾಖೆ ಡಿಎಫ್ಒ ವರುಣ್ ಕುಮಾರ್, ಕಿರಣ್ ಕುಮಾರ್, ಪಂಚಾಯಿತಿ ಅಧಿಕಾರಿ ಗೋವಿಂದಗೌಡ, ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.