ದೊಡ್ಡಬಳ್ಳಾಪುರ: ನಗರಸಭೆ ವತಿಯಿಂದ ನಾಗರಕೆರೆ ಅಂಗಳದಲ್ಲಿ ಹಾಕಲಾಗಿರುವ ಒಳಚರಂಡಿ ಪೈಪ್‌ಲೈನ್‌ಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎನ್ನುವ ಪರಿಸರವಾದಿಗಳ ಒತ್ತಾಯಕ್ಕೆ ಮಣಿದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಕೆರೆ ಅಂಗಳದಲ್ಲಿ ಒಳ ಚರಂಡಿ ಪೈಪ್‌ಲೈನ್ ಹಾಕಿರುವುದೇ ಅವೈಜ್ಞಾನಿಕವಾಗಿದೆ. ಜೊತೆಗೆ ಅಲ್ಲೇ ಒಳಚರಂಡಿ ಚೇಂಬರ್ ಸಹ ನಿರ್ಮಿಸಲಾಗಿದೆ. ಈ ಚೆಂಬರ್‌ಗಳು ಕೆರೆಯಲ್ಲಿ ನೀರು ನಿಲ್ಲುವ ಹಂತಕ್ಕಿಂತಲು ತಳಮಟ್ಟದಲ್ಲಿ ಇರುವುದರಿಂದ ಕೆರೆಯ ನೀರೆಲ್ಲವು ಒಳಚರಂಡಿ ಮೂಲಕ ಹರಿದು ಹೊರ ಹೋಗುತ್ತಿವೆ. ಇದಲ್ಲದೆ ಒಳರಂಡಿ ನೀರಿನ ಪೈಪ್ ಬಂದ್ ಆದಾಗ ಹೊರಬರುವ ಕೊಳಚೆ ನೀರು ಕೆರೆಗೆ ಸೇರುತ್ತಿವೆ ಎಂದು ಕೆರೆ ಅಂಚಿನ ನಿವಾಸಿಗಳಾದ ಜಿ.ಯಲ್ಲಪ್ಪ, ರಾಮಣ್ಣ, ಯುವ ಸಂಚಲನದ ಚಿದಾನಂದ್ ಹಾಗೂ ಗಿರೀಶ್ ಮಾಹಿತಿ ನೀಡಿದ್ದಾರೆ.
ಕೆರೆ ಕಲುಷಿತವಾಗುತ್ತಿರುವುದನ್ನು ತಡೆಯುವಂತೆ ಕೋರಿ ಚೆನ್ನೈನ ಹಸಿರು ನ್ಯಾಯಮಂಡಳಿಯಲ್ಲಿ ಗಿರೀಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕೆರೆ ಅಂಗಳದಲ್ಲಿನ ಒಳಚರಂಡಿ ಪೈಪ್‌ಲೈನ್ ಬೇರೆಡೆಗೆ ಸ್ಥಳಾಂತರ ಮಾಡದ ಹೊರತು ಕೆರೆಯ ನೀರು ಕಳುಷಿತವಾಗುವನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ನ್ಯಾಯಮಂಡಳಿಯ ಗಮನಕ್ಕೆ ತರಲಾಗಿದೆ.
ಸ್ಥಳ ಪರಿಶೀಲನೆ ನಂತರ ಮಾಹಿತಿ ನೀಡಿದ ಸಣ್ಣ ನೀರಾವರಿ ಇಲಾಖೆಯ ಜಿಲ್ಲಾ ಹಂತದ ಅಧಿಕಾರಿ ಮಂಜುನಾಥ್, ಕೆರೆಗಳಲ್ಲಿನ ಪೈಪ್ ಲೈನ್ ಬದಲಾಯಿಸಲು ನಗರಸಭೆಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಇಲಾಖೆಯ ಗಮನಕ್ಕೆ ತರದೆ ಒಳಚರಂಡಿ ಕಾಮಗಾರಿ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರವೀಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.