ADVERTISEMENT

ದೇವನಹಳ್ಳಿಯಲ್ಲಿ 15 ದಿನಗಳಿಂದ ಯೂರಿಯಾ ಅಭಾವ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 13:34 IST
Last Updated 28 ಸೆಪ್ಟೆಂಬರ್ 2019, 13:34 IST
   

ವಿಜಯಪುರ: ದೇವನಹಳ್ಳಿ ತಾಲ್ಲೂಕಿನಲ್ಲಿ 15 ದಿನಗಳಿಂದ ಯೂರಿಯಾ ರಸಗೊಬ್ಬರ ಅಭಾವ ತಲೆದೋರಿದ್ದು, ರೈತರು ದೈನಂದಿನ ಕೆಲಸ ಬಿಟ್ಟು ರಸಗೊಬ್ಬರಗಳ ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ ಎಂದು ರೈತ ಶ್ರೀರಾಮಪ್ಪ ಹೇಳಿದರು.

ತೀವ್ರ ಬರಗಾಲದಿಂದ ಬಸವಳಿದು ಹೋಗಿದ್ದ ರೈತರ ಪಾಲಿಗೆ ಇತ್ತೀಚೆಗೆ ಸುರಿದ ಮಳೆ ಸ್ವಲ್ಪಮಟ್ಟಿಗೆ ಚೇತರಿಕೆ ನೀಡಿದೆ. ಮಳೆ ನಂತರ ಬೆಳೆಗಳಿಗೆ ತಕ್ಷಣದ ಪೋಷಕಾಂಶವಾಗಿ ಯೂರಿಯಾ ಗೊಬ್ಬರ ನೀಡಬೇಕು. ಒಂದು ವಾರದಿಂದ ಯಾವ ಅಂಗಡಿಗೆ ಹೋದರೂ ಯೂರಿಯಾ ಸಿಗುತ್ತಿಲ್ಲ. ಮೂರು ದಿನಗಳಿಂದ ಖಾಸಗಿ ಅಂಗಡಿಗಳ ಮುಂದೆ ರೈತರು ಗೊಬ್ಬರಕ್ಕಾಗಿ ನಿಲ್ಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ನಂಜುಂಡಪ್ಪ ಮಾತನಾಡಿ, ರೈತರ ಪರವಾಗಿದ್ದೇವೆ ಎಂದು ಹೇಳುತ್ತಿರುವ ಸರ್ಕಾರ, ರೈತರಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ರಸಗೊಬ್ಬರಗಳಿಗಾಗಿ ಪೈಪೋಟಿ ಶುರುವಾಗಿರುವುದು ಬೇಸರ ಮೂಡಿಸಿದೆ. ಖಾಸಗಿ ಅಂಗಡಿಯೊಂದಕ್ಕೆ 480 ಚೀಲ ಗೊಬ್ಬರ ಬಂದಿತ್ತು. ರೈತರು ಸರದಿಯಲ್ಲಿ ನಿಂತು ಮೊದಲು ಬಂದವರು ತಲಾ 4 ಚೀಲ ಪಡೆದುಕೊಂಡರು. ನಂತರ ಬಂದವರು ಉಳಿದವರು ಬರಿಗೈಲಿ ವಾಪಸ್ಸು ಹೋಗುವಂತಾಗಿದೆ ಎಂದರು.

ADVERTISEMENT

ರೈತ ಅಶ್ವಥಪ್ಪ ಮಾತನಾಡಿ, ರಸಗೊಬ್ಬರ ಅಭಾವ ಉಂಟಾಗಿ ಈಗಾಗಲೆ 15 ದಿನವಾಗಿದೆ. ಆದರೂ ಪೂರೈಕೆ ಆಗುತ್ತಿಲ್ಲ. ಸೂಕ್ತ ಸಮಯಕ್ಕೆ ಗೊಬ್ಬರ ನೀಡದಿದ್ದರೆ ಬೆಳೆ ಇಳುವರಿ ಬರುವುದಿಲ್ಲ ಎನ್ನುವ ಆತಂಕ ರೈತರದ್ದಾಗಿದೆ. ಸರ್ಕಾರ ಕೂಡಲೇ ಅಗತ್ಯವಿರುವ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು. ಜಿಲ್ಲಾಧಿಕಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ರಸಗೊಬ್ಬರ ವ್ಯಾಪಾರಿಮಧು ಮಾತನಾಡಿ, ಎಲ್ಲ ರಸಗೊಬ್ಬರಗಳು ಲಭಿಸುತ್ತಿವೆ. ಯೂರಿಯಾ 15 ದಿನಗಳಿಂದ ಬಂದಿಲ್ಲ. ಈಗ ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ಕಾರಣ ಎಲ್ಲ ಕಡೆಗಳಲ್ಲಿ ಬೇಡಿಕೆ ಜಾಸ್ತಿಯಿರುವ ಕಾರಣ ಅಭಾವ ತಲೆದೋರಿದೆ. ಪ್ರತಿದಿನ ರೈತರು ಕೇಳಿಕೊಂಡು ವಾಪಸ್‌ ಹೋಗುತ್ತಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.