ದೇವನಹಳ್ಳಿ: ವೀರಸೇನಾನಿ ಹಜರತ್ ಟಿಪ್ಪು ಸುಲ್ತಾನ್ ಜನ್ಮ ಸ್ಥಳದ ಅಭಿವೃದ್ಧಿ ಬಗ್ಗೆ ಸರ್ಕಾರ ನಿರ್ಲಕ್ಷ್ಯವಹಿಸತ್ತಾ ಬಂದಿದೆ. ಇವುಗಳಿಗಾಗಿ ಇನ್ನು ಹದಿನೈದು ದಿನಗಳಲ್ಲಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದುಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಇಲ್ಲಿನ ಟಿಪ್ಪು ಜನ್ಮಸ್ಥಳ ಮತ್ತು ಟಿಪ್ಪು ವೃತ್ತದಲ್ಲಿರುವ ಅವರ ಪ್ರತಿಮೆಗೆ ಟಿಪ್ಪು ಹುತಾತ್ಮ ದಿನಾಚರಣೆ ಆಂಗವಾಗಿ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಯುದ್ಧದಲ್ಲಿ ಹುತಾತ್ಮನಾದ ಟಿಪ್ಪುವಿನ ಚರಿತ್ರೆ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ, ಹುಟ್ಟಿದ ಸ್ಥಳ, ವೀರ ಮರಣವನ್ನಪ್ಪಿದ ಶ್ರೀರಂಗಪಟ್ಟಣದಲ್ಲಿ ಈವರೆಗೆ ಅಭಿವೃದ್ಧಿಯಾಗಿಲ್ಲ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಒಡಲಿನಲ್ಲಿ ಇಟ್ಟುಕೊಂಡು ಟಿಪ್ಪು ಜನ್ಮಸ್ಥಳ ವಿರುವ ದೇವನಹಳ್ಳಿ ತಾಲ್ಲೂಕು ಕೇಂದ್ರ ಬೆಂಗಳೂರಿನ ಒಂದು ಭಾಗವಾಗಿ ಬೆಳೆದರೂ ಸರ್ಕಾರ ಕಿಂಚಿತ್ತು ಆಸಕ್ತಿ ವಹಿಸದಿರುವುದು ವಿಷಾದನಿಯವೆಂದು ಹೇಳಿದರು.
ಆಡಳಿತ ನಡೆಸುವ ಸರ್ಕಾರ ಟಿಪ್ಪು ಸುಲ್ತಾನನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಿಸಿಕೊಳ್ಳುತ್ತದೆ. ನಂತರ ಅದರ ಗೋಜಿಗೆ ಹೋಗುವುದಿಲ್ಲ, ಸರ್ಕಾರ ಟಿಪ್ಪು ಹುತಾತ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಮಾಡುವುದಾಗಿ ಹೇಳಿತ್ತು. ಚುನಾವಣೆಯ ನಂತರ ಮರೆತು ಬಿಟ್ಟಿದೆ ಎಂದು ದೂರಿದರು.
ಜಯಂತಿಯನ್ನು ಒಂದು ಬಾರಿ ವಿಧಾನಸೌಧದ ಹಾಲಿನಲ್ಲಿ ಆಚರಿಸಲಾಗುವುದು ಎಂದು ಹೇಳಿದರೆ ಮತ್ತೊಂದು ಬಾರಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಎನ್ನುತ್ತದೆ, ತಲೆ ಕಾಲು ಇಲ್ಲದ ಸರ್ಕಾರ ಬೆಳಿಗ್ಗೆ ಒಂದು ಹೇಳಿಕೆ ರಾತ್ರಿ ಮತ್ತೊಂದು ಹೇಳಿಕೆ ನೀಡುತ್ತದೆ. ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪುವಿನ ಜನ್ಮಸ್ಥಳ ದೇವನಹಳ್ಳಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಮಡಿದ ಮತ್ತೊಂದು ಜನ್ಮಸ್ಥಳ ಬೈಲ ಹೊಂಗಲವನ್ನು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಪಂಚ ವಾರ್ಷಿಕ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ವಿಶ್ವಮಟ್ಟದ ಪ್ರವಾಸೋಧ್ಯಮ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಸುಲ್ತಾನ್ ಯುದ್ಧದಲ್ಲಿ ಬಳಸುತ್ತಿದ್ದ ಖಡ್ಗ, ಗುರಾಣಿ, ಕಾಗದ ಪತ್ರ, ಧರಿಸುತ್ತಿದ್ದ ಉಡುಗೆ ತೊಡುಗೆ ಪ್ರತಿಯೊಂದು ವಸ್ತುಗಳನ್ನು ಶೇಖರಿಸಿ ದೇವನಹಳ್ಳಿಯಲ್ಲಿ ಬೃಹತ್ ವಸ್ತು ಸಂಗ್ರಹಾಲಯನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ವಾಟಾಳ್ ಪಕ್ಷದ ಮುಖಂಡರಾದ ಮುಬಾರಕ್ ಪಾಷ, ಎಚ್.ಆರ್. ಪಾರ್ಥಸಾರಥಿ, ಜಿ.ಎಂ. ರಾಮು, ವಿಶ್ವನಾಥ್, ಮುನ್ನಾ, ಮಹಾದೇವ್, ಬಿಜ್ಜವಾರ ಸುಬ್ರಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.