ADVERTISEMENT

ರಾಜಕಾಲುವೆ ಮುಚ್ಚುವ ಹುನ್ನಾರ ಆರೋಪ

ಕಾಲುವೆಯಲ್ಲಿ ಕುಳಿತು ಜನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 4:28 IST
Last Updated 14 ಜುಲೈ 2023, 4:28 IST
ವಿಜಯಪುರ ಹೋಬಳಿ ಗೊಲ್ಲಹಳ್ಳಿಯ ರಾಜಕಾಲುವೆಯಲ್ಲಿ ರೈತರು ಕುಳಿತು ಪ್ರತಿಭಟನೆ ನಡೆಸಿದರು
ವಿಜಯಪುರ ಹೋಬಳಿ ಗೊಲ್ಲಹಳ್ಳಿಯ ರಾಜಕಾಲುವೆಯಲ್ಲಿ ರೈತರು ಕುಳಿತು ಪ್ರತಿಭಟನೆ ನಡೆಸಿದರು   

ವಿಜಯಪುರ(ದೇವನಹಳ್ಳಿ): ಹೋಬಳಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ಓಡಾಡುತ್ತಿರುವ ಸರ್ಕಾರಿ ರಾಜಕಾಲುವೆಯನ್ನು ಪಕ್ಕದ ಜಮೀನಿನ ಮಾಲೀಕ ಮುಚ್ಚಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ರೈತರು ಹಾಗೂ ನಾಗರಿಕರು ಕಾಲುವೆಯಲ್ಲಿ ಕುಳಿತು ಗುರುವಾರ ಪ್ರತಿಭಟನೆ ನಡೆಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು, ಭೂಮಾಪನ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆಯನ್ನು ಗುರುತಿಸಿ, ಜೂನ್‌ 27 ರಂದು ಒತ್ತುವರಿ ತೆರವುಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನನಿರತರು ಒತ್ತಾಯಿಸಿದರು.

ರಾಜಕಾಲುವೆಯ ಮೇಲೆ ಇಬ್ಬರು ರೈತರಿಗೆ ಸೇರಿದ ಜಮೀನುಗಳು ಇವೆ. ದ್ರಾಕ್ಷಿ, ದಾಳಿಂಬೆ ಬೆಳೆ ಬೆಳೆಯಲಾಗುತ್ತಿದೆ. ಮೊದಲಿನಿಂದಲೂ ಇದೇ ಜಾಗದಲ್ಲಿ ಓಡಾಡುತ್ತಿದ್ದೇವೆ. ನೀರು ಹರಿಯಲು ತೊಂದರೆ ಮಾಡಿಲ್ಲ. ಆದರೆ, ರಿಯಲ್ ಎಸ್ಟೇಟ್ ಉಧ್ಯಮಿ ಚೆನ್ನಾರೆಡ್ಡಿ ಎಂಬುವವರು  ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಹಿಂಬರಹ ನೀಡಿರುವ ತಹಶೀಲ್ದಾರ್ ನಿಯಮದ ಪ್ರಕಾರದ ರಾಜಕಾಲುವೆ ಜಾಗವನ್ನು ರಸ್ತೆಗಾಗಿ ಉಪಯೋಗಿಸಿಕೊಳ್ಳಲು ಅವಕಾಶ ಇರುವುದು ಎಂದು ಹಿಂಬರಹ ನೀಡಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ರಾಜಕಾಲುವೆ ಮುಚ್ಚಲು ಯತ್ನಿಸುತ್ತಿದ್ದಾರೆ ಎಂದು ರೈತರಾದ ಸೊಣ್ಣೇಗೌಡ, ಭೈರೇಗೌಡ, ಗಜೇಂದ್ರ, ಚಂದನ್, ಕುಶಾಲ್ ಬಾಬು, ರಂಗಾರೆಡ್ಡಿ, ನಾರಾಯಣಪ್ಪ ಆರೋಪಿಸಿದರು.

ADVERTISEMENT
ಪೊಲೀಸರ ಭದ್ರತೆಯಲ್ಲಿ ರಾಜಸ್ವ ನಿರೀಕ್ಷಕ ಸಿ.ವೈ.ಕುಮಾರ್ ಅವರನ್ನು ಹೊರಗೆ ಕರೆದುಕೊಂಡು ಬಂದರು

Quote - ಭೂ ಮಾಪಕರ ಮೂಲಕ ಸಮೀಕ್ಷೆ ನಡೆಸಿ ತಹಶೀಲ್ದಾರ್ ಅವರ ಆದೇಶದಂತೆ ಒತ್ತುವರಿ ತೆರವುಗೊಳಿಸಿದ್ದೇವೆಯೇ? ಹೊರತು ಯಾರ ಒತ್ತಡಕ್ಕೆ ಒಳಗಾಗಿ ಮಾಡಿಲ್ಲ. ಸರ್ಕಾರಿ ಭೂಮಿ ಸರ್ವೆ ಮಾಡಲು ಯಾರಿಗೂ ನೊಟೀಸ್ ಕೊಡುವ ಅಗತ್ಯವಿಲ್ಲ. ಸಿ.ವೈ.ಕುಮಾರ್ ರಾಜಸ್ವ ನಿರೀಕ್ಷಕ ವಿಜಯಪುರ

Quote - ರಾಜಕಾಲುವೆ ಅಗಲೀಕರಣ ಅಥವಾ ಅಭಿವೃದ್ಧಿಗೆ ಯಾರಿಗೂ ಅನುಮತಿ ನೀಡಿಲ್ಲ. ಸರ್ಕಾರಿ ಜಾಗಕ್ಕೆ ಅನಧಿಕೃತವಾಗಿ ಯಾರೇ ಅಕ್ರಮ ಪ್ರವೇಶ ಮಾಡಿದರೆ ಕಾಮಗಾರಿ ನಡೆಸಲು ಮುಂದಾದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಶಿವರಾಜ್ ತಹಶೀಲ್ದಾರ್ ದೇವನಹಳ್ಳಿ

Cut-off box - ಮಾತಿನ ಚಕಮಕಿ: ಅಧಿಕಾರಿಗೆ ದಿಗ್ಭಂಧನ  ಘಟನೆಯ ಸ್ಥಳಕ್ಕೆ ಬಂದಿದ್ದ ರಾಜಸ್ವ ನಿರೀಕ್ಷಕ ಸಿ.ವೈ.ಕುಮಾರ್ ಹಾಗೂ ಸ್ಥಳೀಯರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿನ ಸಮಸ್ಯೆಗೆ ಅಧಿಕಾರಿಯೇ ಕಾರಣ ಇದನ್ನು ಇತ್ಯರ್ಥ ಪಡಿಸುವ ತನಕ ಇಲ್ಲಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ರಾಜಸ್ವ ನಿರೀಕ್ಷಕ ಸಿ.ವೈ.ಕುಮಾರ್ ಅವರಿಗೆ ದಿಗ್ಭಂಧನ ಹಾಕಿದ್ದರು. ಪೊಲೀಸರ ಮಧ್ಯಪ್ರವೇಶದಿಂದ ಪೊಲೀಸರ ರಕ್ಷಣೆಯಲ್ಲಿ ಹೊರಗೆ ಕರೆದುಕೊಂಡು ಬಂದರು.

Cut-off box - ಅಧಿಕಾರಿಗಳ ವಿರುದ್ಧ ಡಿ.ಸಿಗೆ ದೂರು ಈ ಕುರಿತು ಪ್ರತಿಕ್ರಿಯಿಸಿದ ಉದ್ಯಮಿ ಚೆನ್ನಾರೆಡ್ಡಿ ‘ನಕಾಶೆಯ ಪ್ರಕಾರ ರಾಜಕಾಲುವೆಯಲ್ಲಿ ಕಾಲುವೆ ತೆಗಿದಿಲ್ಲ. ನನ್ನ ಜಮೀನಿನಲ್ಲಿ ಕಾಲುವೆ ಮಾಡಿದ್ದಾರೆ. ಸಮೀಕ್ಷೆ ನಡೆಸುವ ವೇಳೆ ನನಗೆ ನೊಟೀಸ್ ಜಾರಿ ಮಾಡಿಲ್ಲ. ರಾಜಕಾಲುವೆ ತೆರವುಗೊಳಿಸುವ ವೇಳೆ ಪಕ್ಕದ ಜಮೀನುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆದರೆ ತೆರವು ಕಾರ್ಯಾಚರಣೆ ವೇಳೆ ನಮ್ಮ ತೋಟಕ್ಕೆ ತೊಂದರೆ ಆಗಿದೆ’ ಎಂದು ತಿಳಿಸಿದ್ದಾರೆ. ‘ಅಧಿಕಾರಿಗಳ ವರ್ತನೆಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದೇನೆ. ರಾಜಕಾಲುವೆ ತೆಗೆಯುವಾಗ ನನ್ನ ತೋಟದ ತಡೆಗೋಡೆ ಕಿತ್ತುಹಾಕಿದ್ದರು. ನಾನು ನನ್ನ ತೋಟದ ಭದ್ರತೆಗಾಗಿ ಕಲ್ಲಿನ ಕೂಚ ನೆಡಲು ತಯಾರಿ ಮಾಡಿಕೊಂಡಿದ್ದಾಗ ಅಡ್ಡಿಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.