ವಿಜಯಪುರ(ದೇವನಹಳ್ಳಿ): ಕಸ ಗುಡಿಸಲು ವೈವಿದ್ಯಮ ಸಾಧನೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಹಳೆ ಸಂಪ್ರದಾಯದಂತೆ ಹುಲ್ಲುಕಡ್ಡಿ ಪೊರಕೆ ಬಳಕೆ ಮಾಡಲಾಗುತ್ತಿದೆ. ಇದನ್ನು ತಯಾರಿಸುವ ಹಳ್ಳಿಯ ಕೆಲ ಮಹಿಳೆಯರು ತಮ್ಮ ಖರ್ಚಿನ ಹಣ ದುಡಿದುಕೊಳ್ಳುತ್ತಿದ್ದಾರೆ.
ಸುಣ್ಣ ಮಾರಾಟ ಮಾಡುವ 55–60 ವರ್ಷದ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಹುಲ್ಲುಕಡ್ಡಿ ಸಂಗ್ರಹಿಸಿ ಪೊರಕೆ ಕಟ್ಟುತ್ತಾರೆ.
ಜನವರಿಯಿಂದ ಏಪ್ರಿಲ್ ಅವಧಿಯಲ್ಲಿ ಅನೇಕ ಹಳ್ಳಿ ಮತ್ತು ಬೆಟ್ಟಗುಡ್ಡಗಳನ್ನು ಸುತ್ತಿ ಹುಲ್ಲುಕಡ್ಡಿ ಸಂಗ್ರಹಿಸುತ್ತಾರೆ. ಉಳಿದ ತಿಂಗಳ ಬಿಡುವಿನ ಅವಧಿಯಲ್ಲಿ ಅದಕ್ಕೆ ಪೊರಕೆ ರೂಪ ಕೊಡುತ್ತಾರೆ.
ಒಂದೆಡೆ ಸಂಗ್ರಹಿಸಿ ಒಣಗಿಸಿದ ಕಡ್ಡಿಗಳಲ್ಲಿನ ಮುಳ್ಳುಗಳನ್ನು ಸಣ್ಣ ಕೋಲುಗಳಿಂದ ಜಾಡಿಸಿ, ಸಣ್ಣ, ಸಣ್ಣ ಕಟ್ಟುಗಳನ್ನಾಗಿ ಕಟ್ಟಿ(ಒಂದು ಹಿಡಿ), ಮಾರಾಟ ಮಾಡುತ್ತಾರೆ. ಇದರಿಂದ ಬರುವ ಸಣ್ಣ ಪ್ರಮಾಣದ ಆದಾಯ ಜೀವನ ನಿರ್ವಹಣೆಗೆ ಬಳಸುತ್ತಾರೆ.
ಗ್ರಾಮೀಣ ಭಾಗದಲ್ಲಿ ಒಂದು ಪೊರಕೆಗೆ ₹25 ರಿಂದ ₹30ಗೆ ಮಾರಾಟ ಮಾಡಿದರೆ, ವ್ಯಾಪಾರಸ್ಥರು ಮಹಿಳೆಯರಿಂದ ಖರೀದಿಸಿ ₹35-₹40ಗೆ ಮಾರಾಟ ಮಾಡುತ್ತಾರೆ. ಒಮ್ಮೆ 50–60 ಪೊರಕೆಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ₹1,250 ರಿಂದ ₹1,800 ದೊರೆಯುತ್ತದೆ. ಇದು ನಮ್ಮ ಕುಟುಂಬದ ಖರ್ಚಿಗೆ ಆಗುತ್ತದೆ ಎನ್ನುತ್ತಾರೆ ಪೊರಕೆ ತಯಾರಿಸುವ ಪಿಳ್ಳಮ್ಮ ಮತ್ತು ಗಂಗಮ್ಮ.
ಪಟ್ಟಣದಲ್ಲಿ ಸಿಗುವ ಪೊರಕೆ ಕೆಲ ತಿಂಗಳಲ್ಲೇ ಸವೆದು ಹೋಗುತ್ತದೆ. ನಾವು ತಯಾರಿಸುವ ಪೊರಕೆಗಳು 4–6 ತಿಂಗಳ ವರೆಗೆ ಬಾಳಿಕೆ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.
‘ಜನವರಿಯಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ಪೊರಕೆ ಕಡ್ಡಿ ಸಂಗ್ರಹಿಸಬಹುದು. ಕಡ್ಡಿ ಬಲಿತರೇ ಪ್ರಯೋಜನಕ್ಕೆ ಬರುವುದಿಲ್ಲ. ಮಳೆಯಾದರೆ ಕಡ್ಡಿಗಳು ಸಿಗುವುದಿಲ್ಲ. ಪೊರಕೆ ಕಡ್ಡಿ ಸಂಗ್ರಹಿಸುವ ವೇಳೆ ಹಾವು, ಚೇಳು ಕಡಿತದಿಂದಲೂ ಪಾರಾಗಿದ್ದೇವೆ. ಇದಕ್ಕೆ ಹೆದರಿದರೆ ನಮ್ಮ ಖರ್ಚಿಗೆ ಹಣ ಬರುವುದಿಲ್ಲ. ಎಲ್ಲವನ್ನು ಸಹಿಸಿಕೊಂಡು ದುಡಿದರೆ ಖರ್ಚಿಗೊಂದಿಷ್ಟು ಹಣ ಸಂಪಾದನೆ ಆಗುತ್ತದೆ’ ಎಂದು ತಮ್ಮ ಶ್ರಮ ಜೀವನವನ್ನು ವಿವರಿಸಿದರು.
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕಂಪನಿಗಳ ಬ್ರ್ಯಾಂಡೆಡ್ ಪೊರಕೆ ಬಳಸುವವರ ನಡುವೆಯೂ ಬಡ, ಮಧ್ಯಮವರ್ಗದ ಕೂಲಿಕಾರ್ಮಿಕರ ಮನೆಗಳಲ್ಲಿ ಇಂದಿಗೂ ಹುಲ್ಲುಕಡ್ಡಿಯ ಪೊರಕೆಗಳೇ ಸ್ವಚ್ಛತೆಯ ಸಾಧನವಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಳಲ್ಲಿ ಇಂದಿಗೂ ಈ ಹಲ್ಲುಕಡ್ಡಿ ಪೊರಕೆಯನ್ನೇ ಬಳಕೆ ಮಾಡಲಾಗುತ್ತದೆ. ಇದರಿಂದ ವಿಜಯಪುರದ ಕೆಲ ಮಹಿಳೆಯರಿಗೆ ಸೀಸನಲ್ ವ್ಯಾಪಾರಿ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.