ADVERTISEMENT

ಬಿತ್ತನೆ ಆಲೂಗಡ್ಡೆ ಬೆಲೆ ಏರಿಕೆ: ರೈತರಲ್ಲಿ ಕಳವಳ  

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 14:08 IST
Last Updated 5 ಸೆಪ್ಟೆಂಬರ್ 2024, 14:08 IST
ಬಿತ್ತನೆ ಆಲೂಗಡ್ಡೆ (ಸಾಂಧರ್ಬಿಕ ಚಿತ್ರ).
ಬಿತ್ತನೆ ಆಲೂಗಡ್ಡೆ (ಸಾಂಧರ್ಬಿಕ ಚಿತ್ರ).   

ವಿಜಯಪುರ(ದೇವನಹಳ್ಳಿ): ಬಿತ್ತನೆ ಆಲೂಗಡ್ಡೆ ಬೆಲೆ ಏರಿಕೆಯಾಗಿದ್ದು, ರೈತರಲ್ಲಿ ಕಳವಳ ಮೂಡಿಸಿದೆ.

ಆಲೂಗಡ್ಡೆ ಬಿತ್ತನೆಗೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಭೂಮಿ ಹದಮಾಡಿಕೊಂಡು, ಬಿತ್ತನೆ ಮಾಡಲು ಬಿತ್ತನೆ ಆಲೂಗಡ್ಡೆ ಖರೀದಿಗೆ ಹೋದರೆ, ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 50 ಕೆ.ಜಿ.ತೂಕದ ಒಂದು ಮೂಟೆಗೆ ₹3,500 ಬೆಲೆಗೆ ಮಾರಾಟವಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ತಿಂಗಳ‌ ಹಿಂದೆ ಭೂಮಿ ಉಳುಮೆ ಮಾಡಿಕೊಂಡು ಹದಗೊಳಿಸಿ, ಕೊಟ್ಟಿಗೆ ಗೊಬ್ಬರ ಹಾಕಿ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಒಂದು ಚೀಲ ₹3,200 ರಿಂದ ₹3500ಗೆ ಮಾರಾಟವಾಗುತ್ತಿದೆ.

ADVERTISEMENT

ಒಂದು ಎಕರೆಯಲ್ಲಿ ಬಿತ್ತನೆ ಮಾಡಲು ₹8-10 ಸಾವಿರ ಬಿತ್ತನೆ ಆಲೂಗಡ್ಡೆಗೆ ಬಂಡವಾಳ ಹೂಡಿಕೆ ಮಾಡಬೇಕು. ರೈತರು ಅವರವರ ಶಕ್ತಾನುಸಾರ ಆಲೂಗಡ್ಡೆ ಬಿತ್ತನೆ ಮಾಡುತ್ತಾರೆ. ಇದರಿಂದ ಲಕ್ಷಾಂತರ ರೂಪಾಯಿ ಬಂಡವಾಳವನ್ನೂ ಹೂಡಿಕೆ ಮಾಡಬೇಕಾದ ಅಗತ್ಯವಿದೆ ಎಂದು ರೈತ ಎಂ.ಶಾಮಣ್ಣ ಹೇಳಿದರು.

ಕಳೆದ ವರ್ಷ ಬರಗಾಲದ ಕಾರಣದಿಂದ ಮುಂಗಾರುಮಳೆ ಆರಂಭದಲ್ಲಿ ಕೈಕೊಟ್ಟಿದ್ದರಿಂದ ಬಿತ್ತನೆ ಆಲೂಗಡ್ಡೆಯ ದರ 50 ಕೆ.ಜಿಯ ಒಂದು ಚೀಲಕ್ಕೆ ₹2,500–₹2,800 ಇತ್ತು. ಆದರೆ, ಈ ಬಾರಿ ಚೀಲಕ್ಕೆ ₹3,200 ರಿಂದ ₹3,500ಕ್ಕೆ ಏರಿಕೆಯಾಗಿದೆ.

ಉತ್ತಮವಾಗಿ ಮಳೆಯಾದರೆ, ಬಿತ್ತನೆ ಮಾಡುವ ರೈತರ ಸಂಖ್ಯೆಯೂ ಏರಿಕೆಯಾಗಲಿದ್ದು, ಆಲೂಗಡ್ಡೆಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿ, ಈಗಿರುವ ಬೆಲೆಗಿಂತ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಉತ್ತರ ಭಾರತದಲ್ಲಿ ಮಳೆ ಹೆಚ್ಚಾಗಿರುವುದರಿಂದ ಬಿತ್ತನೆ ಆಲೂಗಡ್ಡೆ ಮೂಟೆಗಳನ್ನು ಲಾರಿಗಳ ಮೂಲಕ ತರಿಸಲು ವ್ಯಾಪಾರಿಗಳಿಗೆ ಕಷ್ಟವಾಗುತ್ತಿದೆ. ಪ್ರಸ್ತುತ ಗೋದಾಮುಗಳಲ್ಲಿ ಲಭ್ಯವಿರುವ ಬಿತ್ತನೆಗಡ್ಡೆಯನ್ನು ಮಾರಾಟ ಮಾಡುತ್ತಿದ್ದಾರೆ.

ಪ್ರತಿ ವರ್ಷ ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಬಿತ್ತನೆ ಆಲೂಗಡ್ಡೆ ಖರೀದಿಸುತ್ತೇವೆ. ಈ ಬಾರಿ ಬೆಲೆ ಕೇಳಿ ಗಾಬರಿಯಾಯಿತು. ತೋಟ ಸಿದ್ಧಮಾಡಿಟ್ಟಿದ್ದೇವೆ. ವಿಧಿಯಿಲ್ಲ ಬೆಲೆ ಜಾಸ್ತಿಯಾದರೂ ಆಲೂಗಡ್ಡೆ ಖರೀದಿಸದಿದ್ದರೆ ಬೇರೆ ದಾರಿಯಿಲ್ಲ.
–ಶ್ರೀರಾಮಪ್ಪ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.