ವಿಜಯಪುರ (ದೇವನಹಳ್ಳಿ): ಇಲ್ಲಿಯ ಮಂಡಿಬೆಲೆ ರಸ್ತೆಯ ವಿಸ್ಡಮ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿಗೆ ಪ್ರಾಂಶುಪಾಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ ಎಂದು ಆರೋಪಿಸಿ ಗುರುವಾರ ಶಾಲೆ ಮುಂದೆ ಪ್ರತಿಭಟನೆ ನಡೆಸಿದ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭವ್ಯಾ ಎಂಬ ಐದನೇ ತರಗತಿ ವಿದ್ಯಾರ್ಥಿನಿಗೆ ಪ್ರಾಂಶುಪಾಲೆ ಉಷಾಕಿರಣ್ ಅವರು ಬೆತ್ತದಿಂದ ಥಳಿಸಿದ್ದು ಕೈ, ಕಾಲಿನ ಮೇಲೆ ಬಾಸುಂಡೆ ಎದ್ದಿವೆ. ಕಿವಿಯ ಹಿಂಭಾಗದಲ್ಲಿ ಊತುಕೊಂಡಿದೆ ಎಂದು ಶಾಲೆಯ ಮುಂದೆ ಜಮಾಯಿಸಿದ್ದ ಪೋಷಕರು ಆರೋಪಿಸಿದರು.
ಬುಧವಾರ ಬೆಳಗ್ಗೆ ವಿದ್ಯಾರ್ಥಿನಿಯನ್ನು ಥಳಿಸಿದ ನಂತರ ಬಾಸುಂಡೆಗೆ ನೋವು ನಿವಾರಕ ಔಷಧಿಯನ್ನು ಸ್ಪ್ರೇ ಮಾಡಿ ಸಂಜೆಯವರೆಗೂ ಕೊಠಡಿಯೊಂದರಲ್ಲಿ ಕೂರಿಸಿದ್ದಾರೆ. ಮಗಳನ್ನು ಶಾಲೆಯಿಂದ ಕರೆದೊಯ್ಯುವಾಗ ಅಸ್ವಸ್ಥಗೊಂಡಿರುವುದು ಗಮನಕ್ಕೆ ಬಂದಿತು. ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಮಗುವಿನ ತಾಯಿ ಪ್ರಭಾವತಿ ತಿಳಿಸಿದರು.
‘ಯಾವ ಕಾರಣಕ್ಕೆ ನನ್ನ ಮಗಳನ್ನು ಬಾಸುಂಡೆ ಬರುವಂತೆ ಥಳಿಸಲಾಗಿದೆ ಎಂಬ ಬಗ್ಗೆ ಶಾಲೆಯಿಂದ ನಮಗೆ ಮಾಹಿತಿ ನೀಡಿಲ್ಲ. ನಾವು ಗುರುವಾರ ಬೆಳಗ್ಗೆ ಶಾಲೆಗೆ ಬಂದು ಪ್ರಾಂಶುಪಾಲರ ಬಳಿ ವಿಚಾರಿಸಿದಾಗ ನಿಮ್ಮ ಮಗು ತಪ್ಪು ಮಾಡಿದೆ ಅದಕ್ಕಾಗಿ ಹೊಡೆದಿರುವುದಾಗಿ ಹೇಳಿದರು’ ಎಂದು ಪೋಷಕರು ಹೇಳಿದರು.
ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ವಿದ್ಯಾರ್ಥಿಯ ತಂದೆ ಆಂಜಿನಪ್ಪ ಹೇಳಿದರು. ಪೊಲೀಸರು ದೂರು ದಾಖಲಿಸಿಕೊಂಡು ಶಾಲೆಗೆ ಹೋಗಿ ಮಹಜರು ನಡೆಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.
‘ಹೊಡೆದಿರುವುದು ನಿಜ’
‘ಶಾಲೆಯಲ್ಲಿ ಅಂಗವಿಕಲ ಮಗು ಇದೆ. ಅದನ್ನು ನೋಡಿಕೊಳ್ಳುವುದಕ್ಕೆ ಒಬ್ಬರನ್ನು ನೇಮಕ ಮಾಡಿದ್ದೇವೆ. ಆದರೂ ಮಕ್ಕಳೂ ಸಹಾಯ ಮಾಡುತ್ತಾರೆ. ಶಾಲೆಯ ಕೆಲವು ಮಕ್ಕಳು ಆ ಅಂಗವಿಕಲ ಮಗುವನ್ನು ಹೀನಾಯವಾಗಿ ನೋಡುತ್ತಿದ್ದರು. ಅದಕ್ಕೆ ಬೆತ್ತದಿಂದ ಹೊಡೆದಿರುವುದು ನಿಜ. ಮಗುವಿನ ಪೋಷಕರ ಗಮನಕ್ಕೆ ತರಬೇಕಾಗಿತ್ತು. ಮಗುವಿಗೆ ಹೊಡೆದಿರುವುದು ತಪ್ಪಾಗಿದೆ’ ಎಂದು ಪ್ರಾಂಶುಪಾಲೆ ಉಷಾಕಿರಣ್ ವಿಷಾದ ವ್ಯಕ್ತಪಡಿಸಿದ್ದಾರೆ.
ಕ್ರಮ ಕೈಗೊಳ್ಳುವ ಅಧಿಕಾರ ಇಲ್ಲ
ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಪ್ರಾಂಶುಪಾಲೆಯ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನಮಗೆ ಅಧಿಕಾರವಿಲ್ಲ. ಆದರೂ ಮಕ್ಕಳಿಗೆ ದೈಹಿಕವಾಗಿ ಶಿಕ್ಷೆ ಕೊಡುವಂತಿಲ್ಲ. ಮಗುವನ್ನು ಶಿಕ್ಷಿಸಿರುವುದರಿಂದ ಶಾಲೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಶಿಫಾರಸು ಮಾಡಲಾಗುತ್ತದೆ. ಘಟನೆಯ ಕುರಿತು ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ.–ಬೈಲಾಂಜಿನಪ್ಪ, ಉಪ ನಿರ್ದೇಶಕ ಶಿಕ್ಷಣ ಇಲಾಖೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.