ADVERTISEMENT

ದೇವನಹಳ್ಳಿ | ವಿಜಯಪುರ: ಮಾನವ ಕಳ್ಳ ಸಾಗಾಣಿಕೆ ತಡೆಗೆ ಮೌನ ನಡಿಗೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:24 IST
Last Updated 19 ಅಕ್ಟೋಬರ್ 2024, 13:24 IST
ವಿಜಯಪುರ ಹೋಬಳಿ ಚಿಕ್ಕಮರಳಿ ಗ್ರಾಮದಿಂದ ಚಿಕ್ಕಬಳ್ಳಾಪುರದವರೆಗೂ ಮಾನವ ಕಳ್ಳ ಸಾಗಾಣಿಕೆಯ ಕುರಿತು ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಮೌನ ಮೆರವಣಿಗೆ ನಡೆಸಿದರು
ವಿಜಯಪುರ ಹೋಬಳಿ ಚಿಕ್ಕಮರಳಿ ಗ್ರಾಮದಿಂದ ಚಿಕ್ಕಬಳ್ಳಾಪುರದವರೆಗೂ ಮಾನವ ಕಳ್ಳ ಸಾಗಾಣಿಕೆಯ ಕುರಿತು ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಮೌನ ಮೆರವಣಿಗೆ ನಡೆಸಿದರು   

ವಿಜಯಪುರ(ದೇವನಹಳ್ಳಿ): ಹೋಬಳಿಯ ಚಿಕ್ಕಮರಳಿ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್‌ನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಗ್ರಾಮ ಜ್ಯೋತಿ ಸೊಸೈಟಿ ಮದನಪಲ್ಲಿ ಸಹಯೋಗದಲ್ಲಿ ಶನಿವಾರ ಚಿಕ್ಕಮುರಳಿಯಿಂದ ಚಿಕ್ಕಬಳ್ಳಾಪುರದವರೆಗೂ ಮಾನವ ಕಳ್ಳ ಸಾಗಾಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮೌನ ನಡಿಗೆ ನಡೆಯಿತು.

ನೂರಾರು ಮಂದಿ ವಿದ್ಯಾರ್ಥಿಗಳು ಮೌನ ಮೆರವಣಿಗೆಯಲ್ಲಿ ಭಾಗವಹಿಸಿ, ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಿದರು. ಸ್ವಯಂ ಸೇವಕರು ಮಾನವ ಕಳ್ಳ ಸಾಗಾಣಿಕೆ ತಡೆಯುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕನ್ನಡ ಪ್ರಾಧ್ಯಾಪಕ ಡಾ.ಎನ್. ಸುರೇಶ್ ಮಾತನಾಡಿ, ಮನುಷ್ಯ ಮನುಷ್ಯನಾಗಿ ಕಾಣದೆ ಮಾರಾಟದ ವಸ್ತುವಾಗಿ ಕಾಣುತ್ತಿರುವುದು ದೊಡ್ಡ ದುರಂತವಾಗಿದೆ. ಜಗತ್ತಿನಲ್ಲಿ ಮಾನವ ಮತ್ತು ಮಾನವನ ಅಂಗಾಂಗಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ದುಷ್ಟತನದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ADVERTISEMENT

ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್, ಮಾನವ ಕಳ್ಳ ಸಾಗಾಣಿಕೆಯು ದೊಡ್ಡ ಸಾಮಾಜಿಕ ಪಿಡುಗಾಗಿದೆ. ದೇಶಾದ್ಯಂತ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ 110 ಸ್ಥಳಗಳಲ್ಲಿ ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೌನ ನಡಿಗೆ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.

ಅಪಹರಣವಾದ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ. ಇಂತಹ ಹೀನ ಕೃತ್ಯ ತಡೆಗಟ್ಟುವುದು ನಾಗರಿಕ ಸಮಾಜದ ಬಹುದೊಡ್ಡ ಜವಾಬ್ದಾರಿಯಾಗಿದೆ. ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕೆಂದು ಎಂದು ಸಲಹೆ ನೀಡಿದರು.

ಮಕ್ಕಳ ರಕ್ಷಣಾಧಿಕಾರಿ ನವ್ವತಾಜ್, ಮಕ್ಕಳ ರಕ್ಷಣಾಧಿಕಾರಿ ಕೆ.ಎನ್. ಮಂಜುನಾಥ್, ಚಿಕ್ಕಬಳ್ಳಾಪುರ ಠಾಣಾಧಿಕಾರಿ ಎನ್. ರಮೇಶ್ ಬಾಬು, ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ವಿ.ವಿಶ್ವಾಸ್, ಸಹಾಯಕ ಪ್ರಾಧ್ಯಾಪಕ ದೀಪಿಕಾ, ಹಿಂದಿ ವಿಭಾಗದ ಸತ್ಯನಾರಾಯಣಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.