ವಿಜಯಪುರ(ದೇವನಹಳ್ಳಿ): ನಿರ್ವಹಣೆ ಕೊರತೆ ಹಾಗೂ ಅಶುಚಿತ್ವದಿಂದ ಹೋಬಳಿಯ ಬಿಜ್ಜವಾರ ಗ್ರಾಮ ಪಂಚಾಯಿತಿಯ ಹೊಲೇರಹಳ್ಳಿ ಗೇಟ್‌ನಲ್ಲಿ ನಿರ್ಮಿಸಿರುವ ಕಲ್ಲಿನ ತಂಗುದಾಣ ಪ್ರಯಾಣಿಕರ ಉಪಯೋಗಕ್ಕೆ ಬಾರದಂತಾಗಿದೆ.
ಚಿಕ್ಕಬಳ್ಳಾಪುರ-ವಿಜಯಪುರ ಮುಖ್ಯರಸ್ತೆ ನಡುವೆ ಇರುವ ಈ ತಂಗುದಾಣವನ್ನು ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಿದ್ದು, ಕುಳಿತುಕೊಳ್ಳಲು ಅಳವಡಿಸಿದ್ದ ಕಲ್ಲಿನ ಆಸನಗಳು ಮುರಿದು ಬಿದ್ದಿವೆ. ಕಟ್ಟಡವು ಬಿರುಕು ಬಿಟ್ಟುದ್ದು, ಶಿಥಿಲಾವಸ್ಥೆಯಲ್ಲಿದೆ. ಇನ್ನೂ ನಿಲ್ದಾಣದ ತುಂಬೆಲ್ಲಾ ಕಸತುಂಬಿಕೊಂಡಿದೆ. ಈ ಕಾರಣಗಳಿಂದ ಪ್ರಯಾಣಿಕರು ತಂಗುದಾಣದಿಂದ ದೂರ ಉಳಿದಿದ್ದಾರೆ.
ಇಲ್ಲಿನ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ಮಂಗಳವಾರ, ಶುಕ್ರವಾರಗಳಂದು ವಿಶೇಷ ಪೂಜೆ ನಡೆಯುತ್ತದೆ. ಹಾಗೂ ಪ್ರತಿ ತಿಂಗಳು ಅಮಾವಾಸ್ಯೆ, ಹುಣ್ಣಿಮೆಯಂದು ವಿಶೇಷ ಪೂಜೆಗಳು ನಡೆಯುತ್ತವೆ. ಈ ವಿಶೇಷ ದಿನಗಳಂದು ಸಾವಿರಾರು ಮಂದಿ ಇಲ್ಲಿಗೆ ಬರುತ್ತಾರೆ.
ಹೊಲೇರಹಳ್ಳಿ-ಬಿಜ್ಜವಾರ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಬಸ್ಸಿಗಾಗಿ ಇಲ್ಲಿಗೆ ಬಂದು ಕಾದು ಕುಳಿತುಕೊಳ್ಳುತ್ತಾರೆ. ತಂಗುದಾಣದ ದುಸ್ಥಿತಿಯನ್ನು ಕಂಡು, ಒಳಗೆ ಹೋಗಿ ಕುಳಿತುಕೊಳ್ಳುವುದಕ್ಕೆ ಭಯಪಟ್ಟು ರಸ್ತೆಯ ಪಕ್ಕದಲ್ಲಿ ನಿಲ್ಲುತ್ತಾರೆ. ಮಳೆಗಾಲದಲ್ಲಿ ತಂಗುದಾಣದ ಪಕ್ಕದಲ್ಲಿರುವ ಅಂಗಡಿಗಳ ಬಳಿ ಆಶ್ರಯ ಪಡೆದುಕೊಳ್ಳುವಂತಾಗಿದೆ.
ಇಲ್ಲಿ ಪ್ರಯಾಣಿಕರಿಗೆ ತಂಗುದಾಣವಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಮಳೆ ಬಂದರೆ ಸೋರುತ್ತಿದೆ. ಕಲ್ಲಿನ ಗೋಡೆ ಬಿರುಕು ಬಿಟ್ಟಿದ್ದು, ಹಲವು ಬಾರಿ ಹಾವುಗಳು ಸೇರಿಕೊಂಡಿವೆ. ಆದ್ದರಿಂದ ಪ್ರಯಾಣಿಕರು ಇಲ್ಲಿ ಕುಳಿತುಕೊಳ್ಳುವುದಕ್ಕೆ ಭಯಪಡುತ್ತಾರೆ. ಹಿಂದೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದುರಸ್ತಿಗೊಳಿಸುವ ಭರವಸೆ ನೀಡಿದ್ದರು. ಬಳಿಕ ಯಾರೂ ಈ ಕಡೆಗೆ ತಿರುಗಿಯೂ ನೋಡಿಲ್ಲ. ಗ್ರಾಮ ಪಂಚಾಯಿತಿಯವರಾದರೂ ಇದನ್ನು ದುರಸ್ತಿ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.