ADVERTISEMENT

ವಿಜಯಪುರ(ದೇವನಹಳ್ಳಿ): ಸಂಭ್ರಮದ ಹೊಲೇರಹಳ್ಳಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 13:35 IST
Last Updated 1 ಮೇ 2024, 13:35 IST
ವಿಜಯಪುರ ಹೋಬಳಿ ಹೊಲೇರಹಳ್ಳಿಯ ಮುನೇಶ್ವರ ದೇವಾಲಯದ ಆವರಣದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮದಿಂದ ನೆರವೇರಿತು
ವಿಜಯಪುರ ಹೋಬಳಿ ಹೊಲೇರಹಳ್ಳಿಯ ಮುನೇಶ್ವರ ದೇವಾಲಯದ ಆವರಣದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮದಿಂದ ನೆರವೇರಿತು   

ವಿಜಯಪುರ(ದೇವನಹಳ್ಳಿ): ಬರಗಾಲದ ನಡುವೆಯೂ ಹೋಬಳಿಯ ಬಿಜ್ಜವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿ ಮುನೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ದೀಪೋತ್ಸವ, ಜಾತ್ರಾಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಹೊಲೇರಹಳ್ಳಿ, ನಾರಾಯಣಪುರ, ಗೊಡ್ಲುಮುದ್ದೇನ ಹಳ್ಳಿ, ದೊಡ್ಡಮುದ್ದೇನ ಹಳ್ಳಿ, ರಂಗನಾಥಪುರ, ಸಿ.ಎನ್. ಹೊಸೂರು, ಮುತ್ತೂರು, ಚಂದೇನಹಳ್ಳಿ, ಚಿಕ್ಕನಹಳ್ಳಿ, ಪುರ, ವೆಂಕಟೇನಹಳ್ಳಿ, ದಂಡಿಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ತಂಬಿಟ್ಟಿನ ದೀಪಗಳನ್ನು ಮಾಡಿಕೊಂಡು, ತಮಟೆ ವಾದನಗಳೊಂದಿಗೆ ದೇವಾಲಯಕ್ಕೆ ಬಂದು ದೀಪಗಳನ್ನು ಬೆಳಗಿದರು.

ಜಾತಿ, ಮತ, ಬೇಧವಿಲ್ಲದೇ ಎಲ್ಲಾ ಧರ್ಮೀಯರೂ ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಜಾತ್ರೆಯನ್ನು ಸಾಮರಸ್ಯದ ಕೇಂದ್ರವನ್ನಾಗಿ ಮಾಡಿದ್ದರು. ದೇವಾಲಯಕ್ಕೆ ವಿದ್ಯುತ್ ದೀಪಾಂಲಕಾರ ಮಾಡಲಾಗಿತ್ತು. ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.

ADVERTISEMENT

ಚಿಕ್ಕಬಳ್ಳಾಪುರ ಮುಖ್ಯರಸ್ತೆಯಿಂದ ದೇವಾಲಯದವರೆಗೂ ರಸ್ತೆಯುದ್ದಕ್ಕೂ ಅಂಗಡಿಗಳನ್ನು ಜೋಡಿಸಿಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸಿದರು. ವಿವಿಧ ಬಗೆಯ ಆಹಾರ ತಯಾರಿಕಾ ಅಂಗಡಿಗಳು, ಸಿಹಿ ಖಾದ್ಯಗಳ ಅಂಗಡಿಗಳು ತಲೆ ಎತ್ತಿದ್ದವು. ಯುವಕರು ಹಾಗೂ ಯುವತಿಯರು ಕೈಗಳ ಮೇಲೆ ಟ್ಯಾಟೂಗಳನ್ನು ಹಾಕಿಸಿಕೊಂಡು ಸಂಭ್ರಮಿಸಿದರು.

ಸುತ್ತಮುತ್ತಲಿನ ಹಳ್ಳಿಗಳೂ ಸೇರಿದಂತೆ ಇತರ ಜಿಲ್ಲೆಗಳಿಂದ ಜನರು ಜಾತ್ರೆಗೆ ಬಂದಿದ್ದರು. ಮಕ್ಕಳು, ಮಹಿಳೆಯರು, ಯುವತಿಯರು, ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲವೆಡೆ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಿದರು. ಕೆಲವು ದಾನಿಗಳು ಜಾತ್ರೆಗೆ ಬಂದಿದ್ದವರಿಗೆ ಅನ್ನದಾನ ಮಾಡುವ ಮೂಲಕ ಹರಕೆ ತೀರಿಸಿದರು.

ಹೆಣ್ಣು ಮಕ್ಕಳಿಗೆ ತಂಬಿಟ್ಟಿನ ದೀಪಗಳು ಹೊರುವ ಸಂಭ್ರಮ: ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮನೆ ಮನೆಯಲ್ಲೂ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಬಿದಿರು ಹಾಗೂ ಸ್ಟೀಲ್ ನಲ್ಲಿ ತಯಾರಿಸಿದ್ದ ಹೂವಿನ ಬುಟ್ಟಿಗಳಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ, ಅವುಗಳಲ್ಲಿ ತಂಬಿಟ್ಟಿನ ದೀಪಗಳನ್ನು ಇಟ್ಟುಕೊಂಡು, ಹೆಣ್ಣುಮಕ್ಕಳು, ಮಹಿಳೆಯರು ಸಂಭ್ರಮದಿಂದ ಹೊಲೇರಹಳ್ಳಿಯವರೆಗೂ ದೀಪಗಳನ್ನು ಹೊತ್ತುಕೊಂಡು ನಡೆದು ಸಂಭ್ರಮಿಸಿದರು.

ಫಂಡರಾಪುರಿ ಭಜನೆ: ಗುಡಿಬಂಡೆ ತಾಲ್ಲೂಕಿನ ಜಂಗಾಲಪಲ್ಲಿ ಗ್ರಾಮದ ಭಜನಾ ತಂಡದವರು, ಪಂಡಾಪುರ ಭಜನೆ ನಡೆಸಿಕೊಟ್ಟರು. ವೃದ್ಧರು, ಯುವಕರು, ಹೆಣ್ಣು ಮಕ್ಕಳು ಭಜನೆಯಲ್ಲಿ ನೃತ್ಯ ಮಾಡುವ ಮೂಲಕ ಜಾತ್ರೆಗೆ ಮೆರಗು ನೀಡಿದರು. ಸಾವಿರಾರು ಮಂದಿ ಭಜನೆ ವೀಕ್ಷಣೆ ಮಾಡಿದರು.

ಕೋಳಿ ಕುರಿಗಳ ಬಲಿ: ದೇವಾಲಯಕ್ಕೆ ಹರಕೆ ಹೊತ್ತುಕೊಂಡಿದ್ದ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಕುರಿ, ಮೇಕೆ, ಕೋಳಿಗಳನ್ನು ಬಲಿಕೊಟ್ಟು ಹರಕೆ ತೀರಿಸಿದರು.

ಭಕ್ತ ಮಾರ್ಕಂಡೇಯ ನಾಟಕ: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಜಾತ್ರೆಯಂದು ರಾತ್ರಿ ಹೊಲೇರಹಳ್ಳಿ ಗ್ರಾಮದ ರಂಗಕಲಾವಿದರು, ವಿದ್ಯುತ್ ದೀಪಾಂಲಕಾರಗಳಿಂದ ಕಂಗೊಳಿಸುತ್ತಿದ್ದ ಸೀನರಿಯಲ್ಲಿ ‘ಭಕ್ತ ಮಾರ್ಕೆಂಡೇಯ’ ನಾಟಕವನ್ನು ಪ್ರದರ್ಶನ ಮಾಡಿದರು.

ರಂಗಭೂಮಿ ಕಲೆಯನ್ನು ಇಷ್ಟಪಡುವ ಕಲಾಭಿಮಾನಿಗಳು ಬಿಸಿಲಿನಲ್ಲೂ ನಾಟಕ ವೀಕ್ಷಣೆಗೆ ಕೂಡಿ ಬಂದಿದ್ದರು. ಜಾತ್ರೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಜಾತ್ರೆಯಲ್ಲಿ ಟ್ಯಾಟೂ ಹಾಕಿಸಿಕೊಂಡ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.