ವಿಜಯಪುರ(ದೇವನಹಳ್ಳಿ): ಒಬ್ಬ ಶಿಕ್ಷಕ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ವಿದ್ಯಾರ್ಥಿಗಳ ವಿಕಸನದ ಜೊತೆಗೆ ಶಾಲೆಯ ವಾತಾವರಣವನ್ನೂ ಬದಲಾವಣೆ ಮಾಡಬಹುದು ಎನ್ನುವುದನ್ನು ಶಿಕ್ಷಕ ಪಿ.ಎಂ.ಕೊಟ್ರೇಶ್ ಸಾಬೀತುಪಡಿಸಿದ್ದಾರೆ.
1994ರಲ್ಲಿ ಗಣಿತ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಕೊಟ್ರೇಶ್ 27 ವರ್ಷ ಕರ್ತವ್ಯ ನಿರ್ವಹಿಸಿ, ಸ್ಥಳೀಯ ದಾನಿಗಳ ಸಹಕಾರದಿಂದ ಶಾಲೆಗೆ ಹೊಸರೂಪ ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಯ ಕಡೆಗೆ ಹೆಚ್ಚು ಗಮನಹರಿಸಿದ್ದಾರೆ.
ಪ್ರಸ್ತುತ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಕರ್ತವ್ಯನಿರ್ವಹಿಸುತ್ತಿದ್ದು, ಅನೇಕ ದಾನಿಗಳ ಸಹಕಾರದಿಂದ ಶಾಲೆಯಲ್ಲಿ ಕಟ್ಟಡ, ಕೊಳವೆಬಾವಿ, ಗ್ರಂಥಾಲಯ, ಕಂಪ್ಯೂಟರ್ ತರಗತಿ, ರಂಗಮಂಟಪ, ಹೀಗೆ ಹಲವು ಸೌಕರ್ಯ ಕಲ್ಪಿಸುವ ಮೂಲಕ ಶಾಲೆಯಲ್ಲಿ ಕಲಿಕಾ ವಾತಾವರಣ ನಿರ್ಮಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿತ್ತಿದ್ದಾರೆ.
ಹಳೇ ವಿದ್ಯಾರ್ಥಿಗಳಿಂದ ಸಹಕಾರ ಪಡೆದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡಾಪರಿಕರ, ಟ್ರ್ಯಾಕ್ ಸೂಟ್, ಗುರುತಿನ ಚೀಟಿಗಳು, ಕಂಪ್ಯೂಟರ್ ತರಿಸಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಪುರಸಭೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೋಟರಿಯಿಂದ ನ್ಯಾಷನಲ್ ಬಿಲ್ಡರ್ ಆವಾರ್ಡ್, ನುಡಿರತ್ನ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.