ವಿಜಯಪುರ (ದೇವನಹಳ್ಳಿ): 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವಿಳಂಬ ಆಗುತ್ತಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡುವಂತೆ ಹೈಕೋರ್ಟ್ ನೀಡಿದ್ದ ತೀರ್ಪಿನಂತೆ, ಮಾ.11 ಮತ್ತು 12 ರಂದು ಎರಡು ವಿಷಯಗಳ ಪರೀಕ್ಷೆ ಬರೆದಿದ್ದಾರೆ. ನಂತರ ಸುಪ್ರೀಂಕೋರ್ಟ್ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿದೆ. ಮಕ್ಕಳಿಗೆ ಶಾಲಾ ಹಂತದಲ್ಲಿ ಪರೀಕ್ಷೆ ನಡೆಸಬೇಕೆ, ಬೇಡವೇ ಎನ್ನುವ ಕುರಿತು ಸರ್ಕಾರ, ಯಾವುದೇ ಆದೇಶ ಹೊರಡಿಸದ ಕಾರಣ, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಶೀಘ್ರ ನಿರ್ಧಾರ ಪ್ರಕಟಿಸಬೇಕು. ವಿದ್ಯಾರ್ಥಿಗಳು, ಶಾಲೆಯ ಹಂತದಲ್ಲೆ ಪರೀಕ್ಷೆ ಬರೆಯಬೇಕೆ ಅಥವಾ ಬೇರೆ ವ್ಯವಸ್ಥೆ ಮಾಡುತ್ತಾರೆಯೇ ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳು ಮೂಡಿವೆ.
1 ರಿಂದ 4ನೇ ತರಗತಿವರೆಗೆ ಹಾಗೂ 6 ಮತ್ತು 7ನೇ ತರಗತಿ ಮಕ್ಕಳಿಗೆ ಶಾಲಾ ಹಂತಗಳಲ್ಲಿ ಪರೀಕ್ಷೆಗಳು ಮುಕ್ತಾಯವಾಗಿದ್ದು, 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
‘ನಾವು ಯಾವುದೇ ಶಾಲೆಗೆ ಹೋದರೂ ಮಕ್ಕಳು, ಪರೀಕ್ಷೆ ಯಾವಾಗ ಸರ್, ನಮ್ಮ ಜೊತೆಯಲ್ಲಿದ್ದ ಸ್ನೇಹಿತರು ಪರೀಕ್ಷೆ ಮುಗಿಸಿಕೊಂಡು ರಜೆ ತೆಗೆದುಕೊಂಡಿದ್ದಾರೆ. ನಮಗ್ಯಾಕೆ ನಡೆಸುತ್ತಿಲ್ಲ. ನಾವು ಓದಿಕೊಂಡಿರುವುದೆಲ್ಲಾ ಮರೆತುಹೋಗುತ್ತಿದೆ ಎನ್ನುತ್ತಿದ್ದಾರೆ. ನಮಗೂ ತುಂಬಾ ಬೇಜಾರಾಗಿದೆ ಎಂದು ಹೇಳುತ್ತಿದ್ದಾರೆ’ ಎಂದು ಹೆಸರೇಳದ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.