ವಿಜಯಪುರ (ಬೆಂ.ಗ್ರಾಮಾಂತರ): ಮೋಸ ಮುಸುಕಿದ ವಾತಾವರಣ, ಜಿಟಿ ಜಿಟಿ ಮಳೆ ಹಾಗೂ ಚಳಿಯ ವಾತಾವರಣದಿಂದ ಮಣ್ಣಿನ ತೇವಾಂಶ ಹೆಚ್ಚಾಗಿದ್ದು, ರೈತರು ಆಲೂಗಡ್ಡೆ ಬಿತ್ತನೆಗೆ ಹಿನ್ನಡೆ ಅನುಭವಿಸುವಂತಾಗಿದೆ.
ಹಿಂಗಾರು ಹಂಗಾಮಿನಲ್ಲಿ ಆಲೂಗಡ್ಡೆ ಬಿತ್ತನೆಗೆ ಸೂಕ್ತ ಸಮಯ ಅಕ್ಟೋಬರ್. ಈ ತಿಂಗಳು ನಿರೀಕ್ಷೆಗೂ ಮೀರಿ ಮಳೆಯಾದ ಕಾರಣ ಬಹಳಷ್ಟು ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಈ ಬೆಳೆಯ ಜೊತೆಗೆ ಇತರೆ ಫಸಲು ಬೆಳೆಯಲು ವಾತಾವರಣ ಸಹಕರಿಸುತ್ತಿಲ್ಲ ಎಂದು ರೈತ ನಾರಾಯಣಸ್ವಾಮಪ್ಪ ಹೇಳಿದರು.
ಹಣ್ಣಿನ ಬೆಳೆಗಳಿಗೂ ರೋಗ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಧಾರಾಕಾರ ಮಳೆಗೆ ರಾಗಿ, ತೊಗರಿ, ನೆಲಗಡಲೆ ಸೇರಿದಂತೆ ಹಲವಾರು ಬೆಳೆಗಳ ಇಳುವರಿ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಮೇವಿನ ಸಮಸ್ಯೆ ಎದುರಾಗಬಹುದು ಎಂಬ ಆತಂಕ ರೈತರಿಗೆ ಕಾಡುತ್ತಿದೆ.
ಕೆಲವು ಭಾಗದಲ್ಲಿ ರಾಗಿ ಹುಲುಸಾಗಿ ಬೆಳೆದಿದೆ. ರೈತರು ತೆನೆ ಕಟಾವು ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮೋಡ ಮುಸುಕಿದರೆ ರಾಗಿ ಬೆಳೆಯು ಕೈಗೆ ಬಂದದ್ದು, ಬಾಯಿಗೆ ಬಾರದಂತಾಗುತ್ತದೆ ಎನ್ನುತ್ತಾರೆ ರೈತ ಕೃಷ್ಣಪ್ಪ.
ತರಕಾರಿ, ಹೂವಿನ ಬೆಳೆ ಕೊಳೆಯುವ ಹಂತಕ್ಕೆ ತಲುಪಿದೆ. ಚಳಿ ಹೆಚ್ಚಾಗಿರುವ ಕಾರಣ, ಹೂವಿನ ಬೆಳೆಯಲ್ಲೂ ಉತ್ತಮ ಇಳುವರಿ ಬರುತ್ತಿಲ್ಲ. ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ನಿರಂತರವಾಗಿ ಔಷಧಿ ಸಿಂಪಡಣೆ ಮಾಡುವ ಮೂಲಕ ಬೆಳೆಗಳನ್ನು ಸಂರಕ್ಷಣೆ ಮಾಡುವುದು ರೈತರಿಗೆ ದೊಡ್ಡ ಸವಾಲಿನ ಜೊತೆಗೆ ಹೊರೆಯಾಗುತ್ತಿದೆ ಎಂದರು.
ಬೆಲೆ ಏರಿಕೆ: ಬೆಳೆ ರಕ್ಷಣೆ, ಕೃಷಿ ಸಾಮಗ್ರಿ ಖರೀದಿ ಸೇರಿದಂತೆ ನಿರ್ವಹಣಾ ವೆಚ್ಚವೂ ಹೆಚ್ಚಳವಾಗಿದೆ. ಇದರ ನಡುವೆಯೂ ಬಿತ್ತನೆ ಆಲೂಗಡ್ಡೆ ಬೆಲೆಯೂ ಏರಿಕೆಯಾಗಿದ್ದು, ಪ್ರಸ್ತುತ ಒಂದು ಮೂಟೆಗೆ ₹ 2,900ರಿಂದ ₹ 3,900 ಇದೆ. ಎರಡು ವರ್ಷಗಳ ಹಿಂದೆ ₹ 1,100ರಿಂದ ₹ 1,550ರ ವರೆಗೆ ಏರಿಕೆಯಾಗಿತ್ತು. ದುಬಾರಿ ಡೀಸೆಲ್ ದರ, ಸಾಗಾಣಿಕೆ ವೆಚ್ಚ, ಗೊಬ್ಬರ, ಬಿತ್ತನೆ ಬೀಜ, ಔಷಧಿ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ ಎನ್ನುತ್ತಾರೆ ರೈತರು.
‘ಕಳೆದ ವರ್ಷ 70 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬೆಳೆ ಬಿತ್ತನೆ ಮಾಡಲಾಗಿತ್ತು. ಈ ವರ್ಷವೂ ಇಷ್ಟೇ ಗುರಿ ಇಟ್ಟುಕೊಂಡಿದ್ದೇವೆ. ಆಲೂಗಡ್ಡೆಯಲ್ಲೂ ಸಾಕಷ್ಟು ಹೊಸ ತಳಿಗಳು ಬಂದಿದೆ. ವಾತಾವರಣದಲ್ಲಿ ಏರುಪೇರಿದ್ದರೂ ಉತ್ತಮ ಬೆಳೆಯಾಗುವಂತಹ ತಳಿಗಳಿವೆ’ ಎಂದುಸಹಾಯಕ ತೋಟಗಾರಿಕೆ ಅಧಿಕಾರಿ ಆದರ್ಶ್ ತಿಳಿಸಿದರು.
‘ಈ ವರ್ಷದ ಮುಂಗಾರಿನಲ್ಲಿ 27 ಹೆಕ್ಟೇರ್ ಬಿತ್ತನೆಯಾಗಿದೆ. ಹಿಂಗಾರಿನಲ್ಲಿ 45 ಹೆಕ್ಟೇರ್ ಬಿತ್ತನೆಯಾಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ರೈತರು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು’ ಎಂಬುದು ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.