ADVERTISEMENT

ಕುರಿ, ಮೇಕೆಗೆ ಗೃಹಬಂಧನ: ಚಾವಣಿಯಿಂದಲೇ ಮೇವು

ಸಾಲ ಮರು ಪಾವತಿಸದ ಅಜ್ಜಿ ಮನೆಗೆ ಬೀಗ ಜಡಿದ ಫೈನಾನ್ಸ್ ಸಿಬ್ಬಂದಿ

ಎಂ.ಮುನಿನಾರಾಯಣ
Published 14 ಆಗಸ್ಟ್ 2024, 3:20 IST
Last Updated 14 ಆಗಸ್ಟ್ 2024, 3:20 IST
ಎರಡು ತಿಂಗಳಿನಿಂದ ಮನೆಯೊಳಗಿರುವ ಕುರಿ ಮತ್ತು ಮೇಕೆ
ಎರಡು ತಿಂಗಳಿನಿಂದ ಮನೆಯೊಳಗಿರುವ ಕುರಿ ಮತ್ತು ಮೇಕೆ   

ವಿಜಯಪುರ (ದೇವನಹಳ್ಳಿ): ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ಎನ್ನುವಂತೆ ತಮ್ಮದಲ್ಲದ ತಪ್ಪಿಗೆ ವಿಜಯಪುರದಲ್ಲಿ ಕುರಿ,  ಮೇಕೆ ಹಾಗೂ ಪಾರಿವಾಳ ಎರಡು ತಿಂಗಳಿಂದ ಗೃಹ‌ ಬಂಧನ ಶಿಕ್ಷೆ ಅನುಭವಿಸುತ್ತಿವೆ!

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪಡೆದ ಸಾಲ ಮರು ಪಾವತಿಸಿಲ್ಲ ಎಂದು ದೇವನಹಳ್ಳಿಯ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಎರಡು ತಿಂಗಳ ಹಿಂದೆ ಚೌಡೇಶ್ವರಿ ಸರ್ಕಲ್ ಸಮೀಪ ವಾಸಿಸುತ್ತಿರುವ 65 ವರ್ಷದ ಜಯಲಕ್ಷ್ಮಮ್ಮ ಹಾಗೂ ಎಂಟನೇ ತರಗತಿ ಓದುತ್ತಿರುವ ಅವರ ಮೊಮ್ಮಗಳನ್ನು ಮನೆಯಿಂದ ಹೊರ ಹಾಕಿ ಬೀಗ ಜಡಿದಿದ್ದಾರೆ. 

ಮನೆಗೆ ಬೀಗ ಜಡಿಯುವ ಭರದಲ್ಲಿ ಮನೆಯೊಳಗಿದ್ದ ಕುರಿ, ಮೇಕೆಯನ್ನು ಗಮನಿಸದ ಫೈನಾನ್ಸ್‌ ಸಿಬ್ಬಂದಿ ಅವನ್ನು ಒಳಗೆ ಬಿಟ್ಟು ಬೀಗ ಹಾಕಿ ಹೋಗಿದ್ದಾರೆ. ಅಂದಿನಿಂದ ಅವು ಮನೆಯೊಳಗೆ ಪರದಾಡುತ್ತಿವೆ. ಅಜ್ಜಿ ಮನೆಯ ಛತ್ತಿನಿಂದ ಪ್ರತಿದಿನ ಆಹಾರ ಕೊಡುತ್ತಿದ್ದಾಳೆ.   

ADVERTISEMENT

ಮೊಮ್ಮಗಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಳಿಸಿರುವ ಅಜ್ಜಿ, ತನ್ನ ಸಾಕು ನಾಯಿಯೊಂದಿಗೆ ಮನೆ ಮುಂದಿನ ಅಂಗಳದ ಪುಟ್ಟ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ಎರಡು ತಿಂಗಳಿಂದ ಮನೆಯೊಳಗಿರುವ ಆ ಪ್ರಾಣಿಗಳನ್ನು ಹೊರಗೆ ತರಲಾದರೂ ಬೀಗ ತೆರೆಯುವಂತೆ ಜಯಲಕ್ಷ್ಮಮ್ಮ ಮಾಡಿಕೊಂಡ ಮನವಿಗೆ ಫೈನಾನ್ಸ್‌ ಸಿಬ್ಬಂದಿ ಮನಸ್ಸು ಕರಗಿಲ್ಲ. 

ಜಯಲಕ್ಷ್ಮಮ್ಮ ಪ್ರತಿದಿನ ಏಣಿಯಿಂದ ಮೇಲ್ಛಾವಣಿ ಏರಿ, ಶೀಟ್‌ ಸರಿಸಿ ಮೇಕೆ, ಕುರಿ ಮತ್ತು ಪಾರಿವಾಳಗಳಿಗೆ ಮೇಲಿನಿಂದ ಆಹಾರ ಮತ್ತು ನೀರು ಕೊಡುತ್ತಿದ್ದಾರೆ. ಒಮ್ಮೆ ಹೀಗೆ ಮೇವು ಹಾಕುವಾಗ ಏಣಿಯಿಂದ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.  

ಕೋವಿಡ್‌ ಸಾಲದ ಹೊರೆ: 

‘2021ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನನ್ನ ಪತಿ ನಾಗಪ್ಪ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಯಾರಿಂದಲೂ ಹಣದ ಸಹಾಯ ಸಿಗಲಿಲ್ಲ‌. ಅನಿವಾರ್ಯವಾಗಿ ದೇವನಹಳ್ಳಿಯ ಫೈನಾನ್ಸ್‌ವೊಂದರಿಂದ ₹2.50 ಲಕ್ಷ ಸಾಲ ಪಡೆದೆವು. ಇದುವರೆಗೂ ₹2.30 ಲಕ್ಷ ಸಾಲ ಮರು ಪಾವತಿಸಿದ್ದೇವೆ. ಆದರೆ, ಬಡ್ಡಿ ಮತ್ತು ಇತರ ಶುಲ್ಕ ಸೇರಿ ಇನ್ನೂ ₹3 ಲಕ್ಷ ಬಾಕಿ ಇದೆ ಎಂದು ಫೈನಾನ್ಸ್‌ ಸಿಬ್ಬಂದಿ ಹೇಳುತ್ತಿದ್ದಾರೆ’ ಎಂದರು.

‘ಮುಂಚಿತವಾಗಿ ನೋಟಿಸ್‌ ನೀಡದೆ ಏಕಾಏಕಿ ಪೊಲೀಸರೊಂದಿಗೆ ಬಂದ ಫೈನಾನ್ಸ್‌ ಸಿಬ್ಬಂದಿ ಮನೆಯಲ್ಲಿದ್ದ 14 ವರ್ಷದ ಮೊಮ್ಮಗಳನ್ನು ಹೊರ ಹಾಕಿ, ಮನೆಗೆ ಬೀಗ ಜಡಿದು ಹೋಗಿದ್ದಾರೆ. ತಕ್ಷಣಕ್ಕೆ ₹1.50 ಲಕ್ಷ ಪಾವತಿಸಿದರೆ ಬೀಗ ತೆಗೆಯುತ್ತೇವೆ. ಇಲ್ಲವಾದರೆ ಹರಾಜು ಮಾಡುತ್ತೇವೆ ಎನ್ನುತ್ತಿದ್ದಾರೆ’ ಎಂದು ಜಯಲಕ್ಷ್ಮಮ್ಮ ಅಳಲು ತೋಡಿಕೊಂಡರು.

‘ಮನೆಗೆ ಬೀಗ ಹಾಕಿದ ಮೇಲೆ ನನ್ನ ಪತಿ ಪರಿಚಿತರೊಬ್ಬರ ಮನೆಯಲ್ಲಿದ್ದಾರೆ. ನಾನು ಮನೆ ಮುಂದಿನ ಕೋಣೆಯಲ್ಲಿ ಮಲಗುತ್ತಿದ್ದೇನೆ. ಪುಟ್ಟ ಕೋಣೆಯಲ್ಲಿ ಅಡುಗೆ ಮಾಡಿಕೊಳ್ಳಲು ಜಾಗ ಇಲ್ಲ. ಎಲ್ಲ ಪಾತ್ರೆ, ಪಗಡ ಮನೆಯೊಳಗೆ ಉಳಿದಿವೆ. ಹಾಗಾಗಿ ಪ್ರತಿದಿನ ಹೋಟೆಲ್‌ನಲ್ಲಿ ತಿಂಡಿ, ಊಟ ಮಾಡಿ ಪತಿಗೆ ಪಾರ್ಸೆಲ್‌ ಕಳಿಸುತ್ತಿದ್ದೇನೆ’ ಎಂದು ಹೇಳಿದರು.

‘ಅಕ್ಕಪಕ್ಕದ ಮನೆಗಳಲ್ಲಿ ಸ್ನಾನ ಮಾಡುತ್ತಿದ್ದೇನೆ. ಕೆಲವರು ಕೊಟ್ಟ ಸೀರೆಯಲ್ಲಿಯೇ ಕಾಲ ಕಳೆಯುತ್ತಿದ್ದೇನೆ‌. ಮನೆಗೆ ಹಾಕಿರುವ ಬೀಗ ತೆಗೆಸಿ ಕುರಿ, ಮೇಕೆ ಹೊರಗೆ ತರುವುದಕ್ಕಾದರೂ ಅವಕಾಶ ಕೊಡಿ’ ಎಂದು ಜಯಲಕ್ಷಮ್ಮ ಅವಲತ್ತುಕೊಂಡರು.

ಖಾಸಗಿ ಹಣಕಾಸು ಸಂಸ್ಥೆ ಮನೆಗೆ ಬೀಗ ಹಾಕಿದ್ದು ಮನೆಯ ಹೊರಗೆ ಕುಳಿತಿರುವ ಜಯಲಕ್ಷ್ಮಮ್ಮ ಮತ್ತು ಅವರ ಪತಿ ನಾಗಪ್ಪ
ಬೀಗ ಜಡಿದಿರುವ ಮನೆ ಮುಂದೆ ಜಯಲಕ್ಷ್ಮಮ್ಮ
ಆನ್‌ಲೈನ್‌ ಮೂಲಕ ಸಾಲ ಮರು ಪಾವತಿ ಮಾಡಲಾಗಿದೆ. ನಾವು ಕಟ್ಟಿರುವ ಸಾಲದ ಮೊತ್ತ ಬಡ್ಡಿಗೆ ಜಮೆಯಾಗಿದೆ. ₹1 ಲಕ್ಷ ರೂಪಾಯಿ ಕಾನೂನು ಪ್ರಕ್ರಿಯೆಗೆ ಖರ್ಚು ಆಗಿದೆ ಎಂದು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಹೇಳುತ್ತಿದ್ದಾರೆ.
- ಮಹೇಶ ಜಯಲಕ್ಷ್ಮಮ್ಮನವರ ಪುತ್ರ
ಏಕಾಏಕಿ ಮನೆಗೆ ಬೀಗ ಹಾಕಿಲ್ಲ. ಬ್ಯಾಂಕಿನ ನಿಯಮಾವಳಿ ಪ್ರಕಾರ ಕೋರ್ಟ್‌ನಿಂದ ಸಾಲಗಾರರಿಗೆ ನೋಟಿಸ್‌ ಕಳುಹಿಸಲಾಗಿದೆ. ಆದರೂ ಅವರು ಸಾಲ‌ ಮರುಪಾವತಿಸದ ಕಾರಣ ಕಾನೂನಿನ ಪ್ರಕಾರವಾಗಿಯೇ ಮನೆಗೆ ಬೀಗ ಹಾಕಿದ್ದೇವೆ.
-ಕಾರ್ತಿಕ್ ಸಾಲ ವಸೂಲಿ ವ್ಯವಸ್ಥಾಪಕ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ದೇವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.