ADVERTISEMENT

ವಿಜಯಪುರ: ಮತ ಜಾಗೃತಿಗೆ ಬಂದ ಅಧಿಕಾರಿಗಳಿಗೆ ತರಾಟೆ

ನೀರು ಪೂರೈಕೆಗೆ ಸ್ಥಳೀಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 6:36 IST
Last Updated 14 ಏಪ್ರಿಲ್ 2023, 6:36 IST
ವಿಜಯಪುರ ಪಟ್ಟಣದ 1ನೇ ವಾರ್ಡಿನ ಅಶೋಕ ನಗರದಲ್ಲಿ ಮತದಾನ ಜಾಗೃತಿಗಾಗಿ ಬಂದಿದ್ದ ಅಧಿಕಾರಿಗಳ ಬಳಿ ವಾರಕ್ಕೊಮ್ಮೆ ನೀರು ಬಿಡುವಂತೆ ಅನುಕೂಲ ಮಾಡಿಕೊಡಿ ಎಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು
ವಿಜಯಪುರ ಪಟ್ಟಣದ 1ನೇ ವಾರ್ಡಿನ ಅಶೋಕ ನಗರದಲ್ಲಿ ಮತದಾನ ಜಾಗೃತಿಗಾಗಿ ಬಂದಿದ್ದ ಅಧಿಕಾರಿಗಳ ಬಳಿ ವಾರಕ್ಕೊಮ್ಮೆ ನೀರು ಬಿಡುವಂತೆ ಅನುಕೂಲ ಮಾಡಿಕೊಡಿ ಎಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು   

ವಿಜಯಪುರ(ದೇವನಹಳ್ಳಿ): ‘ಮೊದಲು ನಮಗೆ ನೀರು ಕೊಡಿ, ನಾವು ಮತ ಹಾಕುತ್ತೇವೆ. ಪ್ರತಿ ಚುನಾವಣೆಯಲ್ಲೂ ಮತ ಹಾಕುವುದು ನಮಗೆ ತಿಳಿದಿದೆ. ಆದರೆ, ಇಲ್ಲಿಗೆ 15 ದಿನಗಳಿಗೊಮ್ಮೆ ನೀರು ಬರುತ್ತಿದೆ. ಕನಿಷ್ಠ ವಾರಕ್ಕೊಮ್ಮೆ ಆದರೂ ನೀರು ಪೂರೈಕೆ ಮಾಡಬೇಕು.’

ಇದು ವಿಜಯಪುರ ಪಟ್ಟಣದ 1ನೇ ವಾರ್ಡ್‌ನ ಅಶೋಕ ನಗರದಲ್ಲಿ ಗುರುವಾರ ಮತದಾನ ಜಾಗೃತಿ ಮೂಡಿಸಲು ಬಂದ ಸ್ವೀಪ್‌ ಸಮಿತಿ ಅಧಿಕಾರಿಗಳಿಗೆ ಸಾರ್ವಜನಿಕರು ತರಾಟೆಗೆ ತೆಗದುಕೊಂಡ ರೀತಿ.

ಪ್ರತಿಯೊಂದು ಚುನಾವಣೆ ಸಮಯದಲ್ಲೂ ನೀರಿಗಾಗಿ ಮನವಿ ಮಾಡುತ್ತಿದ್ದೇವೆ. ಆದರೆ, ಮತದಾನ ಬಳಿಕ, ಚುನಾಯಿತ ಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ಇತ್ತ ತಿರುಗಿಯೂ ನೋಡುವುದಿಲ್ಲ. ಮತದಾನ ನಮ್ಮ ಹಕ್ಕು. ಅದನ್ನು ತಪ್ಪೆದೆ ಮಾಡುತ್ತೇವೆ. ನಮ್ಮ ಮತದಾನದಿಂದ ಚುನಾಯಿತರಾಗುವವರು ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಅಸಮಾಧಾನ ಸ್ಥಳೀಯರು
ವ್ಯಕ್ತಪಡಿಸಿದರು.

ADVERTISEMENT

ಈ ವಾರ್ಡ್‌ ನಿವಾಸಿಗಳಿಗೆ ನೀರು ಪೂರೈಸಲು ಕೊಳವೆಬಾವಿ ಕೊರೆಯಿಸಲಾಗಿದೆ. ಆದರೆ, ಕೆಲವು ಪ್ರಭಾವಿಗಳ ಮನೆಗಳಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸುವವರು ಯಾರು ಇಲ್ಲದಂತಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದೆರ ಮೋಟಾರು ಸುಟ್ಟುಹೋಗಿದೆ, ಪೈಪ್‌ಲೈನ್ ಹಾಳಾಗಿದೆ ರಿಪೇರಿ ಮಾಡಿಸಬೇಕು, ಬೆಸ್ಕಾಂ ಶುಲ್ಕ ಪಾವತಿಸಿದ ಕಾರಣ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಸಬೂಬು ಹೇಳಿ ಹೋಗುತ್ತಾರೆ. ನಾವು ಸುಡುವ ಬೇಸಿಗೆಯಲ್ಲಿ ನೀರಿನ ಸೌಕರ್ಯವಿಲ್ಲದೆ ಬದುಕುವುದು ಹೇಗೆ ಎಂದು ಸ್ಥಳೀಯ ನಿವಾಸಿ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಹಲವು ಬಾರಿ ಮನವಿ ಸಲ್ಲಿಸಿದರೂ ಯಾರು ಸ್ಪಂದಿಸುತ್ತಿಲ್ಲ. ಈ ಕುರಿತು ವಾಟರ್‌ಮೆನ್‌ಗಳನ್ನು ಕೇಳಿದರೆ, ನೀವು ಕಚೇರಿಗೆ ಹೋಗಿ ವಿಚಾರಿಸಿ, ನನ್ನ ಕೆಲಸ ಎಷ್ಟಿದೆಯೋ ಅಷ್ಟು ಮಾಡ್ತೇನೆ ಎನ್ನುತ್ತಾರೆ. ಸದಸ್ಯರನ್ನು ಕೇಳಿದರೆ, ನೀರು ಬಿಡುವಂತೆ ಸೂಚನೆ ಕೊಡುತ್ತೇವೆ ಎನ್ನುತ್ತಾರೆ. ಅವರ ಉತ್ತರ ಕೇಳಿ, ಕೇಳಿ ಬೇಸರವಾಗಿಬಿಟ್ಟಿದೆ. ನಮಗೆ ನೀವು ಏನೂ ಕೊಡಬೇಡಿ, ವಾರಕ್ಕೊಮ್ಮೆ ನೀರು ಕೊಡಿ ಸಾಕು’ ಎಂದು ಸ್ಥಳೀಯ ನಿವಾಸಿ ಮುಬೀನಾ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.