ಬೆಂಗಳೂರು: ನಗರದಿಂದ ಸಾಗಣೆಯಾದ ಮಿಶ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಗೊಬ್ಬರ ತಯಾರಿಸಬೇಕಿದ್ದ ಸಂಸ್ಥೆ, ನಿಯಮ ಉಲ್ಲಂಘಿಸಿ ಅರ್ಧಕ್ಕಿಂತ ಹೆಚ್ಚು ಕಸವನ್ನು ಮಣ್ಣಿನಲ್ಲಿ ಹೂಳಿದೆ.
ತ್ಯಾಜ್ಯ ಸಂಸ್ಕರಣೆ ಹಾಗೂ ಅವೈಜ್ಞಾನಿಕ ವಿಲೇವಾರಿಯಿಂದ ದೊಡ್ಡಬೆಳವಂಗಲದ ಚಿಗರೇನಹಳ್ಳಿ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿರುವ ಎಂಎಸ್‌ಜಿಪಿ ಇನ್‌ಫ್ರಾಟೆಕ್ ಸಂಸ್ಥೆ ವಿರುದ್ಧ, ನಗರದಿಂದ ತ್ಯಾಜ್ಯ ಸಾಗಣೆ ಮಾಡುವ ಗುತ್ತಿಗೆದಾರರ ಸಂಘವೂ ನಿಯಮ ಉಲ್ಲಂಘಟನೆಯ ಆರೋಪ ಮಾಡಿದೆ.
ಎಂಎಸ್‌ಜಿಪಿ ಇನ್‌ಫ್ರಾಟೆಕ್ ಸಂಸ್ಥೆ ಘನ ತ್ಯಾಜ್ಯ ಸಂಸ್ಕರಣೆ, ಭೂಭರ್ತಿಯಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಕುರಿತು ತನಿಖೆ ನಡೆಸಬೇಕು ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರ ಸಂಘ ಮನವಿ ಸಲ್ಲಿಸಿದೆ.
‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದ ಚಿಗರೇನಹಳ್ಳಿಯಲ್ಲಿ ಘನತ್ಯಾಜ್ಯ ಸಂಸ್ಕರಣೆ ಹಾಗೂ ಭೂಭರ್ತಿಗೆ ಸೌಲಭ್ಯ ಒದಗಿಸಲು ಎಂಎಸ್‌ಜಿಪಿ ಇನ್‌ಫ್ರಾಟೆಕ್ ಸಂಸ್ಥೆಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ಶೇ 50ಕ್ಕೂ ಹೆಚ್ಚು ತ್ಯಾಜ್ಯವನ್ನು ಭೂಭರ್ತಿ ಮಾಡಲಾಗಿದೆ. ಆರ್ಥಿಕವಾಗಿಯೂ ಪಾಲಿಕೆಗೆ ನಷ್ಟವಾಗಿದೆ. ಈ ಬಗ್ಗೆ ಲೋಕಾಯುಕ್ತ ಅಥವಾ ಸಿಐಡಿ ತನಿಖೆ ನಡೆಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಮಣಿಯಂ ಅವರು ಪತ್ರ ಬರೆದಿದ್ದಾರೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್‌ನ (ಬಿಎಸ್‌ಡಬ್ಲ್ಯುಎಂಎಲ್) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೂ ದೂರಿನ ಪ್ರತಿ ಸಲ್ಲಿಸಿದ್ದಾರೆ.
‘ಘನತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಶೇ 15ಕ್ಕಿಂತ ಹೆಚ್ಚು ತ್ಯಾಜ್ಯವನ್ನು ಭೂಭರ್ತಿ ಮಾಡುವಂತಿಲ್ಲ ಎಂಬ ನಿಯಮವಿದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ನೋಟಿಸ್ ನೀಡಿದ್ದರೂ ಎಂಎಸ್‌ಜಿಪಿ, 4.60 ಲಕ್ಷ ಟನ್‌ನಿಂದ 5.60 ಲಕ್ಷ ಟನ್‌ನಷ್ಟು ತ್ಯಾಜ್ಯವನ್ನು ಮಣ್ಣಿನಲ್ಲಿ (ಮಡ್ ಕ್ಯಾಪ್ಡ್) ಹೂಳಿದೆ. ಪ್ರತಿ ನಿತ್ಯ 500 ಟನ್ ಮಿಶ್ರ ತ್ಯಾಜ್ಯ ಸಂಸ್ಕರಣೆ ಸಾಮರ್ಥ್ಯದ ಘಟಕವನ್ನು 2014ರಿಂದ 2022ರವರೆಗೆ ನಿರ್ವಹಣೆ ಮಾಡಿದ್ದ ಎಂಎಸ್‌ಜಿಪಿ, ಸುಮಾರು 11.05 ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯವನ್ನು ಬಿಬಿಎಂಪಿಯಿಂದ ಪಡೆದುಕೊಂಡಿದೆ. ಇದರಲ್ಲಿ ಶೇ 50ಕ್ಕೂ ಹೆಚ್ಚು ಪ್ರಮಾಣದ ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ಮಣ್ಣಿನಲ್ಲಿ ಹೂಳಿದೆ’ ಎಂದು ದೂರಿದ್ದಾರೆ.
‘ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಎಂಎಸ್‌ಜಿಪಿ ವಿರುದ್ಧ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಅವರು ಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ (150/2021) ದಾಖಲಿಸಿದ್ದಾರೆ. ಇದು ಒಪ್ಪಂದದ ಉಲ್ಲಂಘನೆಯಾಗಿದೆ. ಟಿಪ್ಪಿಂಗ್ ಶುಲ್ಕ ಹಾಗೂ ಅಂತಿಮ ತ್ಯಾಜ್ಯ ರಸೀದಿಯಲ್ಲಿ ಶೇ 15ರಷ್ಟು ಮೊತ್ತವನ್ನು ಉಳಿಸಿಕೊಂಡು, ಗುತ್ತಿಗೆ ಅವಧಿ ಮುಗಿದ ನಂತರದ 180 ತಿಂಗಳಲ್ಲಿ ಅದನ್ನು ಮಾಸಿಕವಾಗಿ ನೀಡಬೇಕು. ಆದರೆ, ಶೇ 100ರಷ್ಟೂ ಹಣವನ್ನು ಈಗಾಗಲೇ ಪಾವತಿಸಲಾಗಿದೆ’ ಎಂದು ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.