ADVERTISEMENT

ಕೆರೆಗೆ ತ್ಯಾಜ್ಯ ನೀರು: ಲಕ್ಷಾಂತರ ಮೀನುಗಳ ಸಾವು

ಉದ್ಯಮಿ ಕಿರಣ್‌ ಮಜುಂದಾರ್‌ ಎಕ್ಸ್‌ ಖಾತೆಯಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:29 IST
Last Updated 18 ಅಕ್ಟೋಬರ್ 2024, 14:29 IST
ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿವೆ
ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿವೆ   

ಆನೇಕಲ್: ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆಗೆ ಕಲುಷಿತ ನೀರು ಹರಿದು ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. 

ಮೀನುಗಳ ಸಾವಿಗೆ ಉದ್ಯಮಿ ಕಿರಣ್‌ ಮಜುಂದಾರ್‌ ಎಕ್ಸ್‌ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ಧಾರೆ. ‘ಕೆರೆಯಲ್ಲಿ ಮೀನುಗಳ ಮಾರಣ ಹೋಮಕ್ಕೆ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯವೇ ಕಾರಣ. ಕೆರೆ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಾಗಿ ಕೈಗೊಂಡಿದ್ದ ಪ್ರಯತ್ನ ವಿಫಲಗೊಂಡಿದೆ. ವಿಷಕಾರಿ ನೀರು ಕೆರೆಗೆ ಹರಿದು ಮೀನುಗಳು ಸತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಯೋಕಾನ್‌ ಪ್ರತಿಷ್ಠಾನ ಮೂಲಕ ಚಿಕ್ಕನಾಗಮಂಗಲ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಬಯೋಕಾನ್‌ ಕೆರೆ ಎಂದೇ ಕರೆಯಲಾಗುತ್ತದೆ. ಕೆರೆ ಸುತ್ತಮುತ್ತಲ ಅಪಾರ್ಟ್‌ಮೆಂಟ್‌ ಮತ್ತು ಬಡಾವಣೆ ತ್ಯಾಜ್ಯ ನೀರು ಕೆರೆ ಸೇರುತ್ತಿದೆ. ಅಲ್ಲದೆ, ಬಿಬಿಎಂಪಿ ಘನತ್ಯಾಜ್ಯ ಘಟಕದ ಕಲುಷಿತ ನೀರು ಕೂಡ ಕೆರೆಗೆ ಸೇರಿದ್ದು ಕಳೆದ ಮೂರು ದಿನಗಳಿಂದ ಮೀನುಗಳು ಸಾವನ್ನಪ್ಪುತ್ತಿವೆ. ಇದರಿಂದ ಇಡೀ ಪರಿಸರವೇ ಕಲುಷಿತಗೊಂಡಿದೆ ಎನ್ನುತ್ತಾರೆ ಸ್ಥಳೀಯರಾದ ಅನಿಲ್. 

ADVERTISEMENT

ಕಳೆದ ವರ್ಷ ಕೂಡ ಇದೇ ಕೆರೆಯಲ್ಲಿ ಮೀನುಗಳು ಸತ್ತಿದ್ದವು. ಮಳೆ ಹೆಚ್ಚಾದಾಗ ಮಳೆ ನೀರಿನ ಜತೆಗೆ ಕಲುಷಿತ ನೀರು ಕೆರೆಗೆ ಹರಿಯುತ್ತದೆ. ಆದರೆ, ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.

ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮದನ್‌ ಮಾತನಾಡಿ, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಲಾರಿಗಟ್ಟಲೇ ಕಸ ಎಸೆಯಲಾಗಿದೆ. ಮಳೆ ಹೆಚ್ಚಾದ್ದರಿಂದ ಕಸದಲ್ಲಿನ ತ್ಯಾಜ್ಯ ನೀರು ಕೆರೆಗೆ ಹರಿದು ಮೀನುಗಳು ಮೃತಪಟ್ಟಿವೆ. ಈ ಸಂಬಂಧ ಘಟಕದ ಮುಖ್ಯಸ್ಥರಿಗೆ ನೋಟಿಸ್‌ ನೀಡಲಾಗಿದೆ. ಪೊಲೀಸ್‌ ಠಾಣೆಗೂ ದೂರು ನೀಡಲಾಗಿದೆ ಎಂದರು.

ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆಯಲ್ಲಿನ ತ್ಯಾಜ್ಯನೀರು
ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆ ನೋಟ
ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಕೆರೆಗೆ ರಾಸಯನಿಕ ಮತ್ತು ಕಲುಷಿತ ನೀರು ಹರಿದಿದ್ದರಿಂದ ಕೆರೆಯಲ್ಲಿದ್ದ ಮೀನುಗಳು ಮಾರಣಹೋಮದ ಕುರಿತು ಕಿರಣ್ ಮಜುಂದಾರ್ ಷಾ ಅವರ ಎಕ್ಸ್ ಖಾತೆಯಲ್ಲಿನ ಅಭಿಪ್ರಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.