ADVERTISEMENT

‘ಶಸ್ತ್ರತ್ಯಾಗ ಮಾಡಿದ ವಿರೋಧ ಪಕ್ಷಗಳು’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 19:46 IST
Last Updated 1 ಡಿಸೆಂಬರ್ 2019, 19:46 IST
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪತ್ರಿಕಾ ಗೋಷ್ಠಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪತ್ರಿಕಾ ಗೋಷ್ಠಿ ನಡೆಸಿದರು.   

ಹೊಸಕೋಟೆ: ಉಪಚುನಾವಣೆಯಲ್ಲಿ ಸೋಲು ಖಚಿತವೆಂದು ತಿಳಿದು ಜನತಾದಳ ಮತ್ತು ಕಾಂಗ್ರೆಸ್ ಪಕ್ಷಗಳು ಭಯಗ್ರಸ್ತಗೊಂಡು ಶಸ್ತ್ರಾಸ್ತ್ರ ಕೆಳಗಿಳಿಸಿವೆ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ತಿಳಿಸಿದರು.

ಅವರು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಪರ ಪ್ರಚಾರ ಮಾಡಲು ಬಂದಿದ್ದಾಗ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ವಿರೋಧ ಪಕ್ಷಗಳಿಗೆ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಾಗದೆ ಕಳೆದೆರಡು ದಿನಗಳಿಂದ ಮೈತ್ರಿಯ ಮಾತನಾಡುತ್ತಿವೆ. ಉಪಚುನಾವಣೆಯ ನಂತರ ಯಡಿಯೂರಪ್ಪನವರು ಸ್ಥಿರ ಸರ್ಕಾರ ಕೊಡಲಿದ್ದಾರೆ. ಮೂರು ತಿಂಗಳಿನಲ್ಲಿ ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲ‌ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ADVERTISEMENT

ಪಕ್ಷದ ಕಾರ್ಯಕರ್ತರ ಅಸಮಾಧಾನದ ಬಗ್ಗೆ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದು ಸಾಮಾನ್ಯ. ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಸಹಜವಾಗಿ ಆಸೆಗಳಿರುತ್ತವೆ. ಅದು ನೆರವೇರದಿದ್ದಾಗ ಅಸಮಾಧಾನ ಸಾಮಾನ್ಯ. ಆದರೆ, ಬಿಜೆಪಿಯ ಕಾರ್ಯಕರ್ತರು ಎಷ್ಟೇ ಅಸಮಾಧಾನವಿದ್ದರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಸಂಸದ ಬಿ.ಎನ್.ಬಚ್ಚೇಗೌಡರ ಬಗ್ಗೆ ಪ್ರಸ್ತಾಪಿಸಿ, ಅವರು ಪಕ್ಷವಿರೋಧಿ ಚಟುವಟಿಕೆ ಮಾಡುತ್ತಿರುವ ಬಗ್ಗೆ ಯಾವುದೇ ಸಾಕ್ಷಿಗಳು ಲಭಿಸಿಲ್ಲ. ಗಮನಕ್ಕೆ ಬಂದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಶರತ್ ಬಚ್ಚೇಗೌಡರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು.

ಶಾಸಕ ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ, ಮಾಜಿ ಶಾಸಕರಾದ ಕೃಷ್ಣಯ್ಯ ಶೆಟ್ಟಿ, ಸಂಪಂಗಿ, ಚಂದ್ರಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಣ್ಣ, ಸಚ್ಚಿದಾನಂದಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.