ದೊಡ್ಡಬಳ್ಳಾಪುರ: ನಗರದಲ್ಲಿನ ನೇಕಾರರು ಉತ್ಪಾದಿಸುತ್ತಿರುವ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ನೇಕಾರ ಉತ್ಪಾದಕ ಕಂಪನಿಗಳ ಸ್ಥಾಪನೆ ನೇಯ್ಗೆ ಉದ್ಯಮಕ್ಕೆ ವ್ಯವಸ್ಥಿತ ಮಾರುಕಟ್ಟೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಧೀರಜ್ ಮುನಿರಾಜು ಅಭಿಪ್ರಾಯಪಟ್ಟರು.
ತ್ಯಾಗರಾಜನಗರದಲ್ಲಿ ನೂತನವಾಗಿ ಸ್ಥಾಪಿತವಾಗಿರುವ ನೇಕಾರ ಚೈತನ್ಯ ನೇಕಾರ ಉತ್ಪಾದಕರ ಕಂಪನಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಈ ಕಂಪನಿಯನ್ನು ತೆರೆಯಲಾಗಿದೆ. ನಗರದಲ್ಲಿ ಇದೇ ಪ್ರಥಮ ನೇಕಾರ ಉತ್ಪಾದಕ ಕಂಪನಿಯಾಗಿದೆ. ಈಗಾಗಲೇ 160 ಜನ ನೇಕಾರರು ಕಂಪನಿಯ ಷೇರುಗಳನ್ನು ತೆಗೆದುಕೊಂಡಿದ್ದಾರೆ. ಸರ್ಕಾರದಿಂದ ₹30 ಲಕ್ಷ ಅನುದಾನ ಕಂಪನಿಗೆ ಬಿಡುಗಡೆಯಾಗಲಿದೆ ಎಂದರು.
ನೇಕಾರರಿಗೆ ಮಾರುಕಟ್ಟೆ ವ್ಯವಸ್ಥೆಯೇ ದೊಡ್ಡ ಸಮಸ್ಯೆಯಾಗಿದೆ. ಆಷಾಢ ಮಾಸದಲ್ಲಿ ಸೀರೆಗಳಿಗೆ ಬೇಡಿಕೆ ಕಡಿಮೆಯಾಗುವುದು ಸಾಮಾನ್ಯ. ಸರ್ಕಾರದ ಸೌಲಭ್ಯಗಳು ಕಟ್ಟ ಕಡೆಯ ನೇಕಾರರಿಗೂ ದೊರಕುವಂತಾಗಬೇಕು. ಸರ್ಕಾರ ನೇಕಾರರಿಗೆ ಮಗ್ಗಗಳನ್ನು ಹಾಕಿಕೊಳ್ಳಲು ಸಹಾಯಧನ ನೀಡುವಂತೆ, ಸಾಲ ಸೌಲಭ್ಯ ನೀಡಿ ಹೆಚ್ಚಿನ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕಿ ಎಂ.ಸೌಮ್ಯ ಮಾತನಾಡಿ, ನೇಕಾರರಿಗೆ ಮಗ್ಗ ಹಾಕಿಕೊಳ್ಳಲು ಸಹಾಯಧನ, ಎಲೆಕ್ಟ್ರಾನಿಕ್ ಜಾಕಾರ್ಡ್ ಹಾಕಿಕೊಳ್ಳಲು ₹4.5 ಲಕ್ಷ ಸಾಲ ನೀಡಲಿದೆ. ಶೇ 50 ರಷ್ಟು ಸಾಮಾನ್ಯರಿಗೆ ಸಹಾಯಧನ ದೊರೆಯಲಿದೆ. ಹಚ್ಚಿನ ಬಂಡವಾಳ ತೊಡಗಿಸುವವರಿಗೆ ನೂತನ ಜವಳಿ ನೀತಿ ಅನ್ವಯ ಕಟ್ಟಡ ನಿರ್ಮಾಣ, ಯಂತ್ರೋಪಕರಣಗಳಿಗೂ ಸಹಾಯಧನ ನೀಡಲಾಗುತ್ತಿದೆ. ಬಂಡವಾಳಕ್ಕೆ ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ತೆಗೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ನೇಕಾರ ಕಂಪನಿಯ ಉದ್ದೇಶಗಳ ಮಾಹಿತಿ ನೀಡಿದ ನೇಕಾರ ಚೈತನ್ಯ ನೇಕಾರ ಉತ್ಪಾದಕರ ಕಂಪನಿ ನಿರ್ದೇಶಕ ಡಿ.ಜಿ.ಶ್ರೀನಿವಾಸಲು, ನೇಕಾರರು ಪ್ರತಿಯೊಂದು ಹಂತದಲ್ಲೂ ಅನೇಕ ತೊಂದರೆಯನ್ನು ಎದುರಿಸುತ್ತಿದ್ದಾರೆ. ಅಸಮರ್ಪಕ ಮೌಲ್ಯವರ್ಧನೆ, ಸೌಲಭ್ಯ ಇಲ್ಲದಿರುವುದು. ನೇಯುವ ವೆಚ್ಚದಲ್ಲಿ ಹೆಚ್ಚಳ. ನೇಯ್ದ ಸೀರೆಗಳಿಗೆ ಉತ್ತಮ ಬೆಲೆ ದೊರೆಯದಿರುವುದು ಈ ಎಲ್ಲ ಕಾರಣಗಳಿಂದಾಗಿ ಉತ್ಪಾದಕತೆ ಕುಂಠಿತವಾಗುತ್ತಿದೆ. ಮಾರುಕಟ್ಟೆ ಸಮಸ್ಯೆ ಸಹ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೇಕಾರ ಸಮುದಾಯದ ಯುವಕರನ್ನು ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಸೀರೆಯ ಹೊಸ ವಿನ್ಯಾಸದ ಅಭಿವೃದ್ಧಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು, ಆದಾಯ ದ್ವಿಗುಣಗೊಳ್ಳಿಸುವುದು, ತಾಂತ್ರಿಕ ಕೌಶಲಗಳ ಅಭಿವೃದ್ದಿ ಹಾಗೂ ಸ್ಥಳೀಯವಾಗಿ ನೇಕಾರರ ಮಾರುಕಟ್ಟೆ ಸ್ಥಾಪನೆ ನೇಕಾರ ಕಂಪನಿಯ ಯೋಜನೆಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಅನಿಕೇತನ ಸಂಸ್ಥೆಯ ನಿರ್ದೇಶಕ ಪುನೀತ್‌ಗೌಡ, ನೇಕಾರ ಚೈತನ್ಯ ನೇಕಾರ ಉತ್ಪಾದಕರ ಕಂಪನಿ ನಿರ್ದೇಶಕ ಪಿ.ಆರ್.ಮಹೇಶ್, ಎಸ್.ಆರ್.ಅಂಬರೀಷ್, ಎಸ್.ಸಾಯಿನಾಥ, ಎ.ಮಂಜುನಾಥ, ಕೆ. ದಿವಾಕರ್, ಎನ್.ಮಹೇಶ್, ವಿ.ಮೋಹನ್, ಪುರುಷೋತ್ತಮ, ಪಿ.ನಾರಾಯಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.