ADVERTISEMENT

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಯಾರಿಂದ ಆರಂಭ?

ನಿಷೇಧವಿದ್ದರೂ, ಹೆಚ್ಚಾಗುತ್ತಲೇ ಇದೆ ಪ್ಲಾಸ್ಟಿಕ್ ವಸ್ತುಗಳ ಬಳಕೆ! l ಸರ್ಕಾರಿ ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್ ಹೂವುಗಳ ಹಾವಳಿ

ನಟರಾಜ ನಾಗಸಂದ್ರ
Published 22 ಆಗಸ್ಟ್ 2022, 4:04 IST
Last Updated 22 ಆಗಸ್ಟ್ 2022, 4:04 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಎಂಎಸ್‌ಜಿಪಿ ಕಸವಿಲೇವಾರಿ ಘಟಕದಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ ತಂದು ಹಾಕಲಾಗಿರುವ ಪ್ಲಾಸ್ಟಿಕ್‌ ಕವರ್‌ಗಳ ಮಿಶ್ರಣದ ಕಸದ ರಾಶಿ
ದೊಡ್ಡಬಳ್ಳಾಪುರ ತಾಲ್ಲೂಕಿನ ಎಂಎಸ್‌ಜಿಪಿ ಕಸವಿಲೇವಾರಿ ಘಟಕದಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ ತಂದು ಹಾಕಲಾಗಿರುವ ಪ್ಲಾಸ್ಟಿಕ್‌ ಕವರ್‌ಗಳ ಮಿಶ್ರಣದ ಕಸದ ರಾಶಿ   

ದೊಡ್ಡಬಳ್ಳಾಪುರ: ಏಕ ಬಳಕೆ ಪ್ಲಾಸ್ಟಿಕ್‌ ಮಾತ್ರ ಬಳಕೆ ಮಾಡಬಾರದು ಎನ್ನುವ ಬಗ್ಗೆ ಈಗ ಎಲ್ಲೆಡೆ ವ್ಯಾಪಕ ಪ್ರಚಾರ ನಡೆಯುತ್ತಿದೆ.

ಹಾಗೆಯೇ ನಗರಸಭೆ ಸೇರಿದಂತೆ ಸ್ಥಳೀಯ ಆಡಳಿತ ಪ್ಲಾಸ್ಟಿಕ್‌ ಕೈ ಚೀಲಗಳನ್ನು ಬಳಕೆ ಮಾಡುವ ದಿನಸಿ ಅಂಗಡಿ, ರಸ್ತೆ ಬದಿಯಲ್ಲಿನ ಹಣ್ಣಿನ ಅಂಗಡಿಗಳಿಗೆ ನುಗ್ಗಿ ಸಾವಿರಗಟ್ಟಲೆ ದಂಡ ವಿಧಿಸಲಾಗುತ್ತಿದೆ. ಇಷ್ಟಾದರೂ ಸಹ ಪ್ಲಾಸ್ಟಿಕ್‌ ಬಳಕೆ ನಿಲ್ಲುವ ಬದಲಿಗೆ ಅದು ಬೇರೆ ಬೇರೆ ರೂಪದಲ್ಲಿ ಮತ್ತಷ್ಟು ಹೆಚ್ಚಾಗುತ್ತಲೇ ಇರುವುದು ಮಾತ್ರ ದುರಂತದ ಸಂಗತಿ.

ಅನಿವಾರ್ಯ ಕಡೆಗಳಲ್ಲಿ ಮಾತ್ರ ಬಳಕೆಯಾಗಬೇಕಿದ್ದ ಪ್ಲಾಸ್ಟಿಕ್‌ ಸರ್ವವ್ಯಾಪಿಯಾಗಿ ಅದು ನೀರು, ಚರಂಡಿ, ಪ್ರಾಣಿ ಪಕ್ಷಿಗಳಿಗಷ್ಟೇ ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ಪ್ರಕೃತಿಯ ಭಾಗವೇ ಆಗಿರುವ ಮನುಷ್ಯನನ್ನೇ ಹೆಚ್ಚು ಬಾಧಿಸಲು ಪ್ರಾರಂಭಿಸಿದೆ.

ADVERTISEMENT

ಏಕ ರೂಪದ ಪ್ಲಾಸ್ಟಿಕ್ ನಿಷೇಧದ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬದಲಿಗೆ ಪೇಪರ್, ಸೆಣಬು, ಬಟ್ಟೆಯ ಬ್ಯಾಗುಗಳನ್ನು ಬಳಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ, ಈ ವಸ್ತುಗಳು ಮಾರುಕಟ್ಟೆಗಳಲ್ಲಿ ಜನತೆಗೆ ಸುಲಭವಾಗಿ ಸಿಗುತ್ತಿವೆ. ಆದರೆ, ಇವು ದುಬಾರಿ ಎಂಬ ಕಾರಣಕ್ಕೊ ಅಥವಾ ಬಳಕೆಯ ಗುಣಮಟ್ಟ ಅಥವಾ ಅವುಗಳ ಬಗ್ಗೆ ಇನ್ನೂ ಜಾಗೃತಿಯ ಕೊರತೆ ಕಾರಣಕ್ಕೆ ಪ್ಲಾಸ್ಟಿಕ್ ಬಳಕೆ ಮಾತ್ರ ಮಿತಿ ಮೀರುತ್ತಲೇ ಇದೆ.

ಯಾವುದೇ ಶುಭ ಸಮಾರಂಭ
ದಿಂದ ಮೊದಲುಗೊಂಡು ದೇವರ ಕೋಣೆಯಲ್ಲಿ ಬಳಸುವ ಹೂವಿನ ಹಾರದವರೆಗೂ ಪ್ಲಾಸ್ಟಿಕ್‌ ತನ್ನ ಕಬಂದ ಬಾಹುಗಳನ್ನು ಚಾಚಿಕೊಂಡಿದೆ.

ಮದುವೆ ಮನೆಗಳಿಗೆ ಬರುವ ಗಣ್ಯರನ್ನು ಅಭಿನಂದಿಸಲು ಬೃಹತ್‌ ಪ್ಲಾಸ್ಟಿಕ್ ಮಣಿ ಹಾರಗಳನ್ನು ಹಾಕಲಾಗುತ್ತಿದೆ. ಈ ಹಾರಗಳ ಹಾವಳಿ ಯಾವ ಹಂತ ತಲುಪಿದೆ ಅಂದರೆ ಇಂದು ಕನಿಷ್ಠ ಮಟ್ಟದ ಒಂದು ಮಣಿ ಹಾರದ ಬೆಲೆ ₹50ಗಳಿಗೆ ಕಡಿಮೆ ಇಲ್ಲ. ಗರಿಷ್ಠ ಬೆಲೆ ಖರೀದಿ ಮಾಡುವವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾವಿರಗಟ್ಟಲೆ ಇದೆ.

ಪ್ರತಿ ಅಂಗಡಿಯಲ್ಲೂ ಲೋಡುಗಟ್ಟಲೆ ಮಣಿ ಹಾರಗಳ ರಾಶಿಗಳೇ ಇವೆ. ಈ ಎಲ್ಲಾ ಹಾರಗಳು ಬೀದಿಗೆ ಬಂದರೆ ಬಳಸಿದ ನಂತರ ಅದೆಲ್ಲಿ ವಿಲೇವಾರಿ ಮಾಡುವುದು ಎನ್ನುವುದೇ ಪರಿಸರ ವಾದಿಗಳನ್ನು ಕಾಡುತ್ತಿರುವ ದೊಡ್ಡ
ಪ್ರಶ್ನೆಯಾಗಿದೆ.

ಪ್ರಕೃತಿ ದತ್ತವಾಗಿ ಬೆಳೆಯುವ ಸುಗಂಧ ರಾಜ ಹೂವು ಸೇರಿದಂತೆ ಕೆಂಪು ಗುಲಾಬಿ ಹೂವುಗಳ ಹಾರಗಳು ಮಾರುಕಟ್ಟೆಯಲ್ಲಿ ಕನಿಷ್ಠ ₹40 ಇರುತ್ತದೆ. ಅಲ್ಲದೆ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ನೀಡಲು ತರಹೇವಾರಿ ಹೂವು ಗುಚ್ಚಗಳು ಇವೆ. ಪ್ಲಾಸ್ಟಿಕ್‌ ಮಣಿ ಹಾರಗಳ ಬದಲಿಗೆ ಇವುಗಳ ಬಳಕೆ ಕಡೆಗೆ ಆದ್ಯತೆ ನೀಡಬೇಕು. ಅದರಲ್ಲೂ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವ ಸರ್ಕಾರ ತಾನೇ ನಡೆಸುವ ಯಾವುದೇ ಕಾರ್ಯಕ್ರಮದಲ್ಲಿ ನೋಡಿದರೂ ಪ್ಲಾಸ್ಟಿಕ್‌ ಮಣಿ ಹಾರಗಳ ಬಳಕೆಯನ್ನೇ ಹೆಚ್ಚಾಗಿ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಹಬ್ಬ, ಜಾತ್ರೆ, ಜನ್ಮದಿನಾಚರಣೆ, ನಗರಕ್ಕೆ ರಾಜಕೀಯ ಮುಖಂಡರ ಭೇಟಿಗಳ ಸಂದರ್ಭದಲ್ಲಂತೂ ರಸ್ತೆ ಯಾವುದು. ವೃತ್ತ ಯಾವುದು ಎನ್ನುವುದೇ ಕಾಣದಷ್ಟು ಬೃಹತ್‌ ಪ್ಲಾಸ್ಟಿಕ್‌ ಬ್ಯಾನರ್‌ಗಳೇ ರಾರಾಜಿಸುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬ್ಯಾನರ್‌ಗಳಿಗೆ ಕಡಿವಾಣವೇ ಇಲ್ಲದಂತಾಗಿದೆ.

ಈ ಹಿಂದೆ ಬ್ಯಾನರ್‌ ಕಟ್ಟಲು ಸ್ಥಳೀಯ ಸಂಸ್ಥೆಯಿಂದ ಅನುಮತಿ, ಶುಲ್ಕ ಪಾವತಿ ಕಡ್ಡಾಯವಾಗಿತ್ತು. ಆದರೆ, ಶುಲ್ಕ ಪಾವತಿ ಇರಲಿ ಅನುಮತಿಯನ್ನು ಯಾರೂ ಪಡೆಯುತ್ತಿಲ್ಲ. ಹೀಗಾಗಿ ಯಾವುದೇ ಒಂದು ರಾಜಕೀಯ ಪಕ್ಷದ ಸಾರ್ವಜನಿಕ ಸಮಾರಂಭ ನಡೆದರೆ ಮತ್ತೆ ಆ ನಗರ, ತಾಲ್ಲೂಕು ಕನಿಷ್ಠ ಒಂದು ವರ್ಷಗಳ ಕಾಲವಾದರು ಚರಂಡಿ, ಕೆರೆ ಅಂಗಳ, ತಿಪ್ಪೆ ಸೇರಿದಂತೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬ್ಯಾನರ್‌ಗಳ
ರಾಶಿ ಬಿದ್ದಿರುವುದುನ್ನು ಕಾಣಬಹುದಾಗಿದೆ.

ಬೆಂಗಳೂರಿನ ಪ್ಲಾಸ್ಟಿಕ್‌ ತಾಲ್ಲೂಕಿಗೆ ಕಂಟಕ

ಬಿಬಿಎಂಪಿ ವ್ಯಾಪ್ತಿಯಿಂದ ಪ್ರತಿ ದಿನ ಸಾವಿರಾರು ಲೋಡು ಕಸ ತಂದು ತಾಲ್ಲೂಕಿನ ಚಿಗರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕವಾಗಿ ರಾಶಿ ಹಾಕುತ್ತಿರುವುದು ಹಳೇಯ ಸುದ್ದಿ.

ಆದರೆ ಇಲ್ಲಿಗೆ ಬಿಬಿಎಂಪಿ ವ್ಯಾಪ್ತಿಯಿಂದ ಬರುತ್ತಿರುವ ಕಸದಲ್ಲಿ ಅರ್ಧಕ್ಕೂ ಹೆಚ್ಚು ಪ್ಲಾಸ್ಟಿಕ್‌ ಕವರ್‌ಗಳು ಸೇರಿದಂತೆ ಇತರೆ ಪ್ಲಾಸ್ಟಿಕ್‌ ತ್ಯಾಜ್ಯವೇ ಬಂದು ರಾಶಿ ಸೇರುತ್ತಿದೆ. ಈ ಪ್ಲಾಸ್ಟಿಕ್‌ ವಿಂಗಡಣೆಯಾಗಿ ಮರು ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಆಕಸ್ಮಿಕ ಬೆಂಕಿ ನೆಪದಲ್ಲಿ ವಾಯು, ಜಲ, ಮಣ್ಣು ಸೇರುತ್ತಿರುವುದೇ ಹೆಚ್ಚಾಗಿದೆ.

ಪ್ಲಾಸ್ಟಿಕ್ ಬಳಕೆಗೆ ಅಸಮಾಧಾನ

ಮುಲಾಜಿಗೆ ಕಟ್ಟುಬಿದ್ದ ಅಧಿಕಾರಿಗಳು

ಅಧಿಕಾರಿಗಳು ರಾಜಕೀಯ ಮುಖಂಡರ ಮುಲಾಜಿಗೆ ಒಳಗಾಗುತ್ತಿರುವುದೇ ನಗರದಲ್ಲಿ ಬ್ಯಾನರ್‌ಗಳ ಹಾವಳಿ ಮಿತಿ ಮೀರಿ ಪರಿಸರಕ್ಕಷ್ಟೇ ಅಲ್ಲದೆ ಜನರ ಸುಗಮ ಸಂಚಾರಕ್ಕು ಅಡ್ಡಿಯಾಗಿದೆ. ರಸ್ತೆಗಳಲ್ಲಿ ಬೈಕ್‌ಗಳಲ್ಲಿ ಅಥವಾ ನಡೆದು ಕೊಂಡು ಹೋಗುವ ಸಂದರ್ಭದಲ್ಲಿ ಅದೆಲ್ಲಿ ಮೇಲೆ ಬಂದು ಬ್ಯಾನರ್‌ಗಳು ಬೀಳುತ್ತವೆಯೋ ಅನ್ನುವ ಭಯದಲ್ಲೇ ರಸ್ತೆಯಲ್ಲಿ ಹೋಗಬೇಕಿದೆ.

ಜಿ.ಸತ್ಯನಾರಾಯಣ್‌ಹಿರಿಯ ಕನ್ನಡಪರ ಹೋರಾಟಗಾರ


ಪ್ರತಿಷ್ಠೆಯ ಕೆಟ್ಟ ಚಾಳಿ ನಿಲ್ಲಬೇಕು

ಹತ್ತಾರು ವರ್ಷಗಳಿಂದಲು ರೈತಪರವಾದ ಹಲವಾರು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ. ನಾವೆಂದೂ ಸಹ ಬೀದಿಗಳಲ್ಲಿ ಹತ್ತಾರು ಬ್ಯಾನರ್‌ಗಳನ್ನು ಕಟ್ಟಿ ಪ್ರಚಾರ ಮಾಡಿ ಹೋರಾಟ ಮಾಡಿದವರಲ್ಲ. ಆದರೆ ಇಂದು ಹತ್ತು ಜನ ಸೇರಿ ನಡೆಸುವ ಹೋರಾಟಕ್ಕು ಹತ್ತಾರು ಬ್ಯಾನರ್‌ಗಳನ್ನು ಕಟ್ಟಲಾಗುತ್ತದೆ. ಪ್ರತಿಷ್ಟೆಯನ್ನು ತೋರಿಸಿಕೊಳ್ಳಲು ಬ್ಯಾನರ್‌ ಕಟ್ಟುವ ಕೆಟ್ಟ ಸಂಸ್ಕೃತಿ ನಿಲ್ಲಬೇಕು.

ಸಿ.ಎಚ್‌.ರಾಮಕೃಷ್ಣಕಾರ್ಯದರ್ಶಿ ಪ್ರಾಂತ ರೈತ ಸಂಘ

ಪುಸ್ತಕ ನೀಡಿ

ಹಲವಾರು ಬಾರಿ ಕಾರ್ಯಕ್ರಮಗಳ ಆಯೋಜಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಮಣಿ ಹಾರ ಬಳಸಬೇಡಿ, ಒಂದು ಗುಲಾಭಿ ಹೂವು ನೀಡಿದರು ಸಾಕು ಅಥವಾ ಒಂದು ಪುಸ್ತಕ ನೀಡಲು. ನಾನು ಇತ್ತೀಚೆಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಹೂವಿನ ಹಾರ ಅಥವಾ ಪುಸ್ತಕ ನೀಡುವುದನ್ನು ಅಭ್ಯಾಸ ಮಾಡಲಾಗುತ್ತಿದೆ.

ಹುಲಿಕಲ್‌ ನಟರಾಜ್‌ರಾಜ್ಯ ಘಟಕದ ಅಧ್ಯಕ್ಷರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌

ಬ್ಯಾನರ್‌ ಕಟ್ಟಲು ಅನುಮತಿ ಕಡ್ಡಾಯ

ಅನುಮತಿ ಪಡೆದು, ನಿಗದಿತ ಶುಲ್ಕ ಪಾವತಿ ಮಾಡಿಯೇ ನಗರದಲ್ಲಿ ಬ್ಯಾನರ್‌ಗಳನ್ನು ಕಟ್ಟಬೇಕು. ಇಲ್ಲವಾದರೆ ದಂಡ ವಿಧಿಸಲಾಗುವುದು. ಹಾಗೆಯೇ ಬ್ಯಾನರ್‌ಗಳನ್ನು ತೆರವು ಮಾಡಲಾಗುವುದು. ಶುಲ್ಕ ಪಾವತಿ ಮಾಡಿರುವ ರಶೀದಿ ಬ್ಯಾನರ್‌ಲ್ಲಿ ಕಾಣುವಂತೆ ಮುದ್ರಿಸಬೇಕು.

ಶಿವಶಂಕರ್‌ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.