ADVERTISEMENT

ರಂಜಾನ್, ಯುಗಾದಿ: ಕುರಿ, ಮೇಕೆ ಬೆಲೆ ಏರಿಕೆ

ರೈತರ ಮೊಗದಲ್ಲಿ ಮಂದಹಾಸ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 7:32 IST
Last Updated 4 ಏಪ್ರಿಲ್ 2024, 7:32 IST
ಕುರಿಗಳ ಹಿಂಡು (ಸಂಗ್ರಹ ಚಿತ್ರ)
ಕುರಿಗಳ ಹಿಂಡು (ಸಂಗ್ರಹ ಚಿತ್ರ)   

ವಿಜಯಪುರ (ದೇವನಹಳ್ಳಿ): ರಂಜಾನ್ ಹಾಗೂ ಹಿಂದೂಗಳ ವರ್ಷದ ತೊಡಕು ಹಬ್ಬದ ಹಿನ್ನೆಲೆಯಲ್ಲಿ ಕುರಿ, ಮೇಕೆಗಳ ಬೆಲೆ ಏರಿಕೆಯಾಗಿದೆ. ಇದರಿಂದ ಸಹಜವಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. 

ಈ ಹಿಂದೆ 20 ಕೆ.ಜಿ.ತೂಕದ ಕುರಿ ₹ 13 ಸಾವಿರ ಇದ್ದದ್ದು ಈಗ ₹ 15 ಸಾವಿರಕ್ಕೆ ಏರಿಕೆಯಾಗಿದೆ. ಒಂದು ಮೇಕೆಗೆ ₹ 12 ಸಾವಿರ ಇದ್ದದ್ದು ₹ 14 ಸಾವಿರಕ್ಕೆ ಏರಿಕೆಯಾಗಿದೆ ಎರಡೂ ಹಬ್ಬಗಳು ಒಂದೇ ಬಾರಿಗೆ ಬಂದಿರುವ ಕಾರಣ, ಕುರಿ, ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವರ್ಷದ ತೊಡಕಿಗೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ಕಾರಣದಿಂದಲೇ ಕೆಲವು ರೈತರು, ಕುರಿ, ಮೇಕೆಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದಾರೆ.

ಹಲವರು ಈಗಾಗಲೇ ತೂಕದ ಆಧಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. 25 ಕೆ.ಜಿ.ಗಿಂತಲೂ ಹೆಚ್ಚು ತೂಕ ಬರುವ ಕುರಿಯನ್ನು ₹ 20 ಸಾವಿರದವರೆಗೂ ರೈತರು ಮಾರಾಟ ಮಾಡುತ್ತಿದ್ದಾರೆ.‌

ADVERTISEMENT

ಮಟನ್ ಬೆಲೆ ಏರಿಕೆ ಸಂಭವ: ಪ್ರಸ್ತುತ ಮಾರುಕಟ್ಟೆಯಲ್ಲಿ  ಒಂದು ಕೆ.ಜಿ. ಕುರಿ ಹಾಗೂ ಒಂದು ಮೇಕೆ ಮಾಂಸ ₹ 700 ಇದೆ. ವರ್ಷ‌ದ ತೊಡಕು ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಈ ಬೆಲೆಯಲ್ಲಿ ₹ 50ರಿಂದ ₹100ರಷ್ಟು ಜಾಸ್ತಿಯಾಗುವ ಸಂಭವವಿದೆ ಎನ್ನುತ್ತಾರೆ ಮಾಂಸದ ಅಂಗಡಿಯ ವ್ಯಾಪಾರಿಗಳು. 

ಅಂತೆಯೇ ಮಾರುಕಟ್ಟೆಯಲ್ಲಿ 1 ಕೆಜಿ ಕೋಳಿ ಮಾಂಸಕ್ಕೆ (ಚಿಕನ್‌) ₹ 200 ಇದೆ. ಎರಡೂ ಹಬ್ಬಗಳ ಹಿನ್ನೆಲೆಯಲ್ಲಿ ಚಿಕನ್ ಬೆಲೆಯಲ್ಲೂ ₹ 20ರಿಂದ ₹ 50ರವರೆಗೆ ಬೆಲೆ ಹೆಚ್ಚಾಗಬಹುದು ಎಂದು ಅಂದಾಜಿಸುತ್ತಾರೆ ಮಾಂಸ ಮಾರಾಟಗಾರ ಶ್ರೀರಾಮಪ್ಪ.

ಎರಡೂ ಹಬ್ಬಗಳು ಒಂದೇ ದಿನ ಬಂದಿರುವ ಕಾರಣ, ನಮಗೆ ಸ್ವಚ್ಚತೆಗೆ ಕಾರ್ಮಿಕರು ಹಾಗೂ ನೀರಿನ ಅಭಾವ ಕಾಡುತ್ತದೆ ಎಂದೂ ಅವರು ಹೇಳಿದರು.

ಕಂಪನಿಯಿಂದ ಖರೀದಿ: ಯಲಿಯೂರಿನಲ್ಲಿ ಸ್ಥಾಪನೆಯಾಗಿರುವ ಡಿ.ಎನ್.ಎಫ್ ಕುರಿ ಮತ್ತು ಮೇಕೆ ಉತ್ಪಾದಕರ ಕಂಪನಿಯವರು ರೈತರಿಂದ ತೂಕದ ಆಧಾರದಲ್ಲಿ ಕುರಿ, ಮೇಕೆಗಳನ್ನು ಖರೀದಿಸುತ್ತಿದ್ದು, ರೈತರು ನೋಂದಾಯಿಸಿಕೊಳ್ಳುವಂತೆ ಕಾರ್ಯದರ್ಶಿ ಪಿಳ್ಳೇಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.