ADVERTISEMENT

ಎಂಇಎಸ್‌ ಪ್ರಭಾವದ ನಡುವೆಯೂ ಗೆದ್ದಿದ್ದೆ

ಹಿಂದೆ ಇದ್ದ ಬಾಗೇವಾಡಿ ಕ್ಷೇತ್ರದಲ್ಲಿ 2004ರಲ್ಲಿ ಶಾಸಕರಾದ ಅಭಯ ಪಾಟೀಲ

ಎಂ.ಮಹೇಶ
Published 16 ಮಾರ್ಚ್ 2018, 7:44 IST
Last Updated 16 ಮಾರ್ಚ್ 2018, 7:44 IST
ಅಭಯ ಪಾಟೀಲ
ಅಭಯ ಪಾಟೀಲ   

ಬೆಳಗಾವಿ:‌ ‘ಹಿಂದೆ ಇದ್ದ ಬಾಗೇವಾಡಿ ಕ್ಷೇತ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಪ್ರಭಾವ, ಕಾಂಗ್ರೆಸ್‌, ಜೆಡಿಎಸ್‌ ಪೈಪೋಟಿ ನಡುವೆಯೂ ಜನ ನನ್ನನ್ನು ಬೆಂಬಲಿಸಿದರು. ಈ ಯುವಕ ಏನಾದರೂ ಮಾಡಬಲ್ಲ ಎಂದು ವಿಶ್ವಾಸ ಇಟ್ಟಿದ್ದರು. ಅವರ ನಂಬಿಕೆ ಉಳಿಸಿಕೊಂಡೆ. ಅಭಿವೃದ್ಧಿಗೆ ಆದ್ಯತೆ ನೀಡಿದೆ...’

–2004ರಲ್ಲಿ ಮೊದಲಿಗೆ ಶಾಸಕರಾಗಿ ಆಯ್ಕೆಯಾದ ದಿನಗಳನ್ನು ಬಿಜೆಪಿಯ ಅಭಯ ಪಾಟೀಲ ‘ಪ್ರಜಾವಾಣಿ’ಯೊಂದಿಗೆ ಮೆಲುಕು ಹಾಕಿದ್ದು ಹೀಗೆ.

‘1990ರಿಂದಲೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದುದ್ದರಿಂದ ಜನರು ಹಾಗೂ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕವಿತ್ತು. ಇದನ್ನು ಗಮನಿಸಿದ್ದ ಪಕ್ಷದ ಮುಖಂಡರು ಟಿಕೆಟ್‌ ನೀಡಿದ್ದರು. 1999ರ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ, 3000 ಮತಗಳ ಅಂತರದಿಂದ ಸೋತಿದ್ದೆ. ಆದರೆ, ಕ್ಷೇತ್ರದ ಜನರ ಒಡನಾಟ ಬಿಟ್ಟಿರಲಿಲ್ಲ. ಹೀಗಾಗಿ, 2004ರ ಚುನಾವಣೆಯಲ್ಲಿ ಗೆದ್ದೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ನಂತರ ಬಾಗೇವಾಡಿ ಕ್ಷೇತ್ರ ರದ್ದಾಯಿತು. ಅದೇ ವರ್ಷ ಹೊಸದಾಗಿ ರಚನೆಯಾದ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೆ’ ಎಂದು ತಿಳಿಸಿದರು.

ADVERTISEMENT

‘ಬಾಗೇವಾಡಿ ಕ್ಷೇತ್ರ ಹರಿದು ಹಂಚಿ ಹೋಗಿತ್ತು. ವ್ಯಾಪ್ತಿ ದೊಡ್ಡದಿತ್ತು. ಹಳ್ಳಿಗಳ ಜನರೇ ಮತದಾರರಾಗಿದ್ದರು. ಅಭ್ಯರ್ಥಿಗಳಿಂದ ಹಣ, ಮದ್ಯ ನಿರೀಕ್ಷಿಸುತ್ತಿರಲಿಲ್ಲ. ಜತೆಯಲ್ಲಿ ಪ್ರಚಾರಕ್ಕೆ ಬರುವವರಿಗೆ ಚಹಾ, ಚುರುಮುರಿ, ಕಬ್ಬಿನ ಹಾಲು, ಮಿರ್ಚಿ ಬಜ್ಜಿ ಕೊಡಿಸುತ್ತಿದ್ದೆವು. ಕೆಲವೊಮ್ಮೆ ಊರಿನ ಮುಖಂಡರೇ ನಮಗೂ ಕೊಡಿಸುತ್ತಿದ್ದರು. ಆಗ ಆಲೆಮನೆಗಳು ಬಹಳ ಕಡೆಗಳಲ್ಲಿ ಇದ್ದವು. ಯಾವುದಾದರೂ ಆಲೆಮನೆಯಲ್ಲಿ ಕಬ್ಬು ಅರೆಯುತ್ತಿರುವುದು ಕಂಡುಬಂದರೆ, ಅಲ್ಲಿಗೇ ಹೋಗಿ ಎಲ್ಲರೂ ಕಬ್ಬಿನ ಹಾಲು ಕುಡಿಯುತ್ತಿದ್ದೆವು’ ಎಂದು ನೆನೆದರು.

ಹಿರಿಯರನ್ನೂ ಕರೆತನ್ನಿ ಎಂದಿದ್ದರು!: ‘‌‘ಪ್ರಚಾರಕ್ಕೆ ಹೋಗುವಾಗ ನನ್ನ ಜೊತೆ 25 ವರ್ಷ ವಯಸ್ಸಿನ ಕೆಳಗಿನ ಯುವಕರ ದಂಡೇ ಇರುತ್ತಿತ್ತು. ಇದನ್ನು ನೋಡಿದ ಮೋದಗಾ ಗ್ರಾಮದ ಹಿರಿಯರೊಬ್ಬರು, ‘ಎಲ್ಲರೂ ಹುಡುಗರೇ ಹೋಗಿ ಮತ ಕೇಳಿದರೆ ಹೇಗೆ? ಯಾರನ್ನಾದರೂ ಹಿರಿಯರನ್ನೂ ಕರೆದುಕೊಂಡು ಹೋಗಿ’ ಎಂದು ಸಲಹೆ ನೀಡಿದ್ದರು. ತಲೆಗೆ ರುಮಾಲು ಕಟ್ಟಿಕೊಳ್ಳಿ ಎಂದಿದ್ದರು. ಅದರಂತೆ ಎಲ್ಲರೂ ರುಮಾಲು ಧರಿಸಿ ಹೋಗಿದ್ದೆವು. ನಾಲ್ಕೈದು ಮಂದಿ ಹಿರಿಯರನ್ನೂ ವಾಹನದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡಿದ್ದೆವು’ ಎಂದು ಹಂಚಿಕೊಂಡರು.

‘ಐದು ಪಾಯಿಂಟ್‌ಗಳನ್ನು ಮಾಡಿಕೊಂಡಿದ್ದೆವು. ಬೆಂಬಲಿಗರು, ಕಾರ್ಯಕರ್ತರು ದ್ವಿಚಕ್ರವಾಹನ ಅಥವಾ ಬಸ್‌ಗಳಲ್ಲಿ ಒಂದು ಕಾಯುತ್ತಿದ್ದರು. ನಂತರ, ಎಲ್ಲರೂ ಸೇರಿ ಪ್ರಚಾರಕ್ಕೆ ಹೋಗುತ್ತಿದ್ದೆವು. ಪ್ರತಿ ಹಳ್ಳಿಗಳ ಜನರನ್ನೂ ಭೇಟಿ ಮಾಡಿದ್ದೆವು. ತಂಡವಾಗಿ ಪ್ರಚಾರ ಮಾಡುತ್ತಿದ್ದೆವು’ ಎಂದು ತಿಳಿಸಿದರು.

ಅಭಿವೃದ್ಧಿ ಮಾಡಿಕೊಡಿ ಎನ್ನುತ್ತಿದ್ದರು: ‘ನೀರಾವರಿ ಸೌಲಭ್ಯ ಒದಗಿಸಿ, ಹೊಲಗಳಿಗೆ ರಸ್ತೆ ನಿರ್ಮಿಸಿ, ಸರ್ಕಾರಿ ಶಾಲೆಗಳನ್ನು ಸುಧಾರಿಸಿ, ಕುಡಿಯುವ ನೀರು ಪೂರೈಸಿ, ಬಸ್‌ ಸಂಪರ್ಕ ಕಲ್ಪಿಸಿ... ಎಂಬಿತ್ಯಾದಿ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನಷ್ಟೇ ಜನರು ಇಡುತ್ತಿದ್ದರು. ರೈತರ ಕಬ್ಬಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಹಾಗೂ ಹೆಚ್ಚುವರಿಯಾಗಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದಾಗ ರೈತರ ಪರವಾಗಿ ಹೋರಾಡಿದ್ದೆ. ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವಂತೆ ಹೆಸ್ಕಾಂ ವಿರುದ್ಧ ನಿರಂತರ ಚಳವಳಿ ನಡೆಸಿದ್ದೆ. ಇದನ್ನೆಲ್ಲಾ ಕಂಡಿದ್ದ ಮತದಾರರು, ಈ ಯುವಕ ಏನಾದರೂ ಮಾಡುತ್ತಾನೆ ಎಂದು ಭರವಸೆ ಇಟ್ಟು ಗೆಲ್ಲಿಸಿದ್ದರು. ಅವರ ಸಂಕಷ್ಟಗಳ ಪರಿಹಾರಕ್ಕೆ ಸ್ಪಂದಿಸಿದ ಸಮಾಧಾನವಿದೆ’ ಎಂದರು.

‘ಆಗೆಲ್ಲಾ ಪೋಸ್ಟರ್‌ ಹಚ್ಚುವುದು, ಗೋಡೆ ಬರಹ ಬರೆಯುವುದೇ ಪ್ರಚಾರದ ಪ್ರಮುಖ ಮಾಧ್ಯಮವಾಗಿತ್ತು. ನೇರವಾಗಿ ಜನರನ್ನು ಭೇಟಿ ಮಾಡಿ ಮತ ಕೇಳಬೇಕಾಗುತ್ತಿತ್ತು. ಕಾರ್ಯಕರ್ತರು ಪ್ರಾಮಾಣಿಕವಾಗಿ ನನ್ನೊಂದಿಗೇ ಇರುತ್ತಿದ್ದರು. ಯಾವ ಗ್ರಾಮ ಗುಡ್ಡದಲ್ಲಿದೆಯೋ ಅಥವಾ ಮತಗಟ್ಟೆ ಇಲ್ಲವೋ ಅಲ್ಲಿಂದ ಗೂಡ್ಸ್ ಟೆಂಪೊ, ವ್ಯಾನ್‌ಗಳಲ್ಲಿ ಕರೆತರುತ್ತಿದ್ದರು. ಬಹುತೇಕರು ಸ್ವಯಂಸ್ಫೂರ್ತಿಯಿಂದ ಬಂದು ಮತ ಚಲಾಯಿಸುತ್ತಿದ್ದರು’ ಎಂದು ನೆನದರು.

ಎಂಎಲ್‌ಎ ಎಂದರೂ ನಂಬಿರಲಿಲ್ಲ!: ‘‘32ನೇ ವಯಸ್ಸಿಗೇ ನಾನು ಶಾಸಕನಾಗಿದ್ದೆ. ವಿಧಾನಸೌಧಕ್ಕೆ ಹೋದಾಗ ಅಲ್ಲಿ ಜವಾನರು ಒಳಗೆ ಬಿಡುತ್ತಿರಲಿಲ್ಲ. ‘ನಾನು ಎಂಎಲ್‌ಎ ಕಣ್ರೀ’ ಎಂದರೂ ನಂಬುತ್ತಿರಲಿಲ್ಲ. ‘ಬಹಳ ಜನ ಹೀಗೇ ಹೇಳುತ್ತಾರೆ. ಎಲ್ಲರನ್ನೂ ಒಳಗಡೆಗೆ ಬಿಡುವುದಕ್ಕೆ ಆಗುವುದಿಲ್ಲ’ ಎಂದು ದೂಡುತ್ತಿದ್ದರು. ಆರಂಭದಲ್ಲಿ ಜೀನ್ಸ್ ಪ್ಯಾಂಟ್‌, ಟಿ–ಶರ್ಟ್‌ ಹಾಕಿಕೊಂಡು ಹೋಗುತ್ತಿದ್ದ ನಾನು ನಂತರ ಬಿಳಿ ಜುಬ್ಬಾ, ಪೈಜಾಮ ಧರಿಸಿ ಹೋಗುವುದಕ್ಕೆ ಶುರು ಮಾಡಿದೆ! ಆಗ, ಜವಾನರು ಹೆಚ್ಚಿನ ಪ್ರಶ್ನೆ ಮಾಡುತ್ತಿರಲಿಲ್ಲ! ಶಾಸಕರ ಗುರುತಿನ ಚೀಟಿ ಬರುವ ಆರು ತಿಂಗಳವರೆಗೂ ಹೀಗೆ, ಗೇಟಿನಲ್ಲಿ ವಾದ–ವಾಗ್ವಾದ ನಡೆಯುತ್ತಲೇ ಇರುತ್ತಿತ್ತು’ ಎಂದು ತಿಳಿಸಿದರು.

‘ವಿಧಾನಮಂಡಲ ಅಧಿವೇಶನದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ಮಾತನಾಡಬೇಕು ಎಂಬ ಕುರಿತು ನನ್ನಂತಹ ಯುವ ಶಾಸಕರಿಗೆ ಪಕ್ಷದಿಂದಲೇ ತರಬೇತಿ ಕೊಟ್ಟಿದ್ದರು. ಇದು ನೆರವಾಗಿತ್ತು. ಪಕ್ಷದ ಮುಖಂಡರು, ಕೆಲವು ಪತ್ರಿಕೆಗಳ ಸಂಪಾದಕರನ್ನೂ ಭೇಟಿ ಮಾಡಿಸಿದ್ದರು. ಇದರಿಂದ ಮಾಧ್ಯಮ ಕಾರ್ಯವೈಖರಿ ಬಗ್ಗೆಯೂ ತಿಳಿಯಿತು’ ಎಂದು ಹೇಳಿದರು.

*
ನಮಗಿಷ್ಟು ರೊಕ್ಕ ಬೇಕು, ನಮ್ಮೊಂದಿಗೆ ಇಷ್ಟು ಮತದಾರರಿದ್ದಾರೆ ಎಂದೆಲ್ಲಾ ಯಾರೂ ಕೇಳುತ್ತಿರಲಿಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಗೆದ್ದಿದ್ದೆ.
–ಅಭಯ ಪಾಟೀಲ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.